ಅಷ್ಟಾವಕ್ರನ ಕತೆ

 ಒಂದಾನೊಂದು ಕಾಲದಲ್ಲಿ ಕಹೋಡ ಎಂಬ ಒಬ್ಬ  ವ್ಯಕ್ತಿ ಧರ್ಮಗ್ರಂಥಗಳ ಅಧ್ಯಯನ ಮಾಡುತ್ತಿದ್ದನು. ಅವನು ಹೊಟ್ಟೆಪಾಡಿಗಾಗಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತ ಅಧ್ಯಯನ ಮಾಡುತ್ತಿದ್ದ. 

ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು.

ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಆ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ." 

 ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟದ ಮಗುವಿನ ಮೇಲೆ ಯಾಕೆ ತಾನು ಇಷ್ಟು ಸಿಟ್ಟು ಮಾಡಿಕೊಳ್ಳಬೇಕು ಎಂದೂ ಯೋಚಿಸದೇ, ತನ್ನ ಮಗುವಿಗೇ ಶಾಪ ಕೊಟ್ಟನು "ನೀನು ಅಷ್ಟಾವಕ್ರನಾಗಿ ಜನಿಸು". 

ತಂದೆಯಿಂದ ಬಂದ  ಶಾಪವಲ್ಲವೇ, ಸಫಲವಾಯಿತು: ಮಗುವು ವಿರೂಪಗೊಂಡು,  ದೇಹದಲ್ಲಿ ಎಂಟು ವಕ್ರಗಳೊಂದಿಗೆ ಜನಿಸಿತು. ಮಗುವಿಗೆ ಅಷ್ಟಾವಕ್ರ ಎಂದು ಹೆಸರು ಇಡಲಾಯಿತು. 

ಅವನ ಬಾಲ್ಯದಲ್ಲಿ ಅವನನ್ನು ನೋಡಿದವರೆಲ್ಲರೂ  ಅಪಹಾಸ್ಯದಿಂದ ನಗುತ್ತಿದ್ದರು. ಆದರೆ ಚಿಕ್ಕ ಅಷ್ಟಾವಕ್ರನಿಗೆ ಅದರಿಂದ ಯಾವ ಸಿಟ್ಟು ಸಿಡುಗೂ ಆಗುತ್ತುರಲಿಲ್ಲ. ಯಾಕೆಂದರೆ ಆ ವಯಸ್ಸಿಗೇ ಅವನು ಒಬ್ಬ ಪ್ರಬುದ್ಧ ಜ್ಞಾನಿಯಾಗಿದ್ದ. 

ರಾಜಾ ಜನಕನು ಅಷ್ಟಾವಕ್ರನ ಶ್ರೇಷ್ಠ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಕೇಳಿದ. ಅವನಿಂದ ವಿದ್ಯೆ ಕಲಿಯಬೇಕೆಂದು ನಿರ್ಧರಿಸಿ,  ಅವನ ಬಳಿ ಬಂದ.  ಆದರೆ ಆಜ್ಞಾಪಿಸುವ ರಾಜನಾಗಿ ಅಲ್ಲ, ವಿನಮ್ರ ವಿದ್ಯಾರ್ಥಿಯಾಗಿ ಬಂದ. 

ಅಷ್ಟಾವಕ್ರ ರಾಜನನ್ನು ತಕ್ಷಣವೇ ತನ್ನ ಶಿಷ್ಯನಾಗಿ ಸ್ವೀಕರಿಸಿದನು. 

ಸರ್ವಶಾಸ್ತ್ರ ಪಾರಂಗತನಾದರೂ ಅಷ್ಟಾವಕ್ರನು ವಿದ್ಯಾರ್ಥಿಗಳನ್ನು ಸ್ವೀಕರಿಸಲು ಉತ್ಸುಕತೆ ತೋರಿಸುತ್ತಿರಲಿಲ್ಲ, ಹಾಗಾಗಿ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದನು.

ಇದು ಇತರ ವಿದ್ಯಾರ್ಥಿಗಳಲ್ಲಿ ವೈಮನಸ್ಸಿಗೆ ಕಾರಣವಾಯಿತು. "ಆಹಾ, ಅಷ್ಟಾವಕ್ರನಿಗೆ ನೆಚ್ಚಿನ ಶಿಷ್ಯ ಜನಕ. ನಮಗೆಲ್ಲ ಕೊಟ್ಟಂತೆ ಯಾವುದೇ ಪರೀಕ್ಷೆಗಳನ್ನು ಕೊಡದೇ ಅವನು ರಾಜನನ್ನು ವಿದ್ಯಾರ್ಥಿಯಾಗಿ ಸ್ವೀಕರಿಸಿದನು!"  ತನ್ನ ಶಿಷ್ಯರ ಹೀಗೆ ಗೊಣಗಾಡುವ ಬಗ್ಗೆ   ಅಷ್ಟಾವಕ್ರನಿಗೆ  ತಿಳಿದಿತ್ತು.

ಒಂದು ದಿನ ರಾಜ ತಡವಾಗಿ ಬಂದನು ಮತ್ತು ಆದ್ದರಿಂದ ಅಷ್ಟಾವಕ್ರನು ಪಾಠವನ್ನು ಆರಂಭಿಸದೇ  ಅವನಿಗಾಗಿ ಕಾದನು. ರಾಜ ಬಂದ ಕ್ಷಣ, ಅಷ್ಟಾವಕ್ರನು ಹೇಳಿದನು: "ಈ ದಿನ ನನಗೆ ಒಂದು ದಿವ್ಯ ದರ್ಶನವಾಗಿದೆ - ಅದೇನೆಂದರೆ ರಾಜಧಾನಿಯಲ್ಲಿ ಭಯಾನಕ ಬೆಂಕಿ ಮತ್ತು ಭೂಕಂಪಗಳು ಬಂದು ಇಡೀ ನಗರ ಹೊತ್ತಿ ಉರಿಯುತ್ತದೆ - ಅಲ್ಲಿರುವ ಎಲ್ಲರೂ ಸಾಯುತ್ತಾರೆ. ನೀವೆಲ್ಲಾ ಪ್ರೀತಿಪಾತ್ರರನ್ನು ಅಥವಾ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದರೆ, ಏನನ್ನಾದರೂ ಉಳಿಸಲು ಬಯಸಿದರೆ ಈಗಲೇ ಧಾವಿಸಬೇಕು!"

ಎಲ್ಲಾ ವಿದ್ಯಾರ್ಥಿಗಳೂ ಗಾಬರಿಯಿಂದ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. 

ಅವರೆಲ್ಲಾ ಹೋದ ನಂತರ, ಅಷ್ಟಾವಕ್ರ ಮತ್ತು ರಾಜ ಮಾತ್ರ ಅಲ್ಲಿ ಕುಳಿತಿದ್ದರು. ಅಷ್ಟಾವಕ್ರ ಮೃದುವಾಗಿ ಕೇಳಿದ, ‘ಮಹಾರಾಜಾ, ನಿಮಗೆ ಬೇಕಾದದ್ದು,  ಉಳಿಸಕೊಳ್ಳಬೇಕಾದದ್ದು ಏನೂ ಇಲ್ಲವೇ?’. 

ಜನಕ ಹೇಳಿದ, “ನನ್ನ ಪ್ರಭು ಮತ್ತು ನನ್ನ ಸ್ನೇಹಿತ, ನೀವು ಮಾತ್ರ ನನ್ನ ಏಕೈಕ ನಿಧಿ” . ಅಷ್ಟಾವಕ್ರನು ತಲೆಯಾಡಿಸಿ ಮೃದುವಾಗಿ ಹೇಳಿದನು, “ನಾನು ನಿಜವಾಗಿಯೂ ನಿಮ್ಮ ನಿಧಿಯಾಗಿದ್ದರೆ, ಈಗಲೇ ನಿಮ್ಮ ಕುದುರೆಯನ್ನು ಏರಿ, ನನ್ನ ವಿದ್ಯಾರ್ಥಿಗಳನ್ನು ಬಳಿಗೆ ಹೋಗಿ "ರಾಜಧಾನಿ ಯಾವುದೇ ಅಪಾಯದಲ್ಲಿಲ್ಲ. ನಾನು ತಪ್ಪಾಗಿ ಭಾವಿಸಿದ್ದೇನೆ" ಎಂದು ಹೇಳಿ ನನ್ನ ಬಳಿಗೆ ಕರೆತನ್ನಿ.  ”. 

 ರಾಜನು ಇತರ ವಿದ್ಯಾರ್ಥಿಗಳನ್ನು ಹುಡುಕಲು ಹೊರಟನು. ಹಿಂತಿರುಗಿದ ನಂತರ, ಇತರ ವಿದ್ಯಾರ್ಥಿಗಳು ಮೂರ್ಖತನದ ಕೆಲಸಗಳಿಗೆ ಇಲ್ಲಿ ಮತ್ತು ಅಲ್ಲಿಗೆ ಕಳುಹಿಸಲ್ಪಟ್ಟಿದ್ದಕ್ಕಾಗಿ ಗೊಣಗಿದರು. ಆದರೆ ಅವರಲ್ಲಿ ಕೆಲವರು  ಗುರುಗಳು ಜನಕನನ್ನು ಪ್ರೀತಿಯ  ವಿದ್ಯಾರ್ಥಿಯಾಗಿ ಏಕೆ ಆರಿಸಿಕೊಂಡರು ಎಂಬುದನ್ನು ಅರ್ಥಮಾಡಿಕೊಂಡರು. 

ಆ ದಿನ ಎಲ್ಲರೂ ಕುಳಿತು ಅಮೃತದಂತಹ ಈ ಅಷ್ಟಾವಕ್ರ ಗೀತೆಯನ್ನು  ಕೇಳಿದರು.

 ಜನಕನ ಕನಸು 

ಇನ್ನೊಂದು ಕತೆಯ ಪ್ರಕಾರ ಒಂದು ರಾತ್ರಿ ರಾಜಾ ಜನಕ ಒಂದು ದುಃಸ್ವಪ್ನ ಕಂಡನು. ಅದರಲ್ಲಿ ಶತ್ರು ಪಡೆ ಬಂದು ಭೀಕರ ಯುದ್ಧ ಮಾಡಿ ಜನಕನ್ನು ಸೋಲಿಸಿಬಿಟ್ಟಿತು. ಅವರ ರಾಜ ಜನಕನನ್ನು ಕೊಲ್ಲುವ ಬದಲು ಗಡಿಪಾರು ಮಾಡಿಬಿಟ್ಟನು.
 
ಜನಕನು ರಾಜ್ಯ, ಧನ, ಕನಕಗಳನ್ನೆಲ್ಲ ಕಳೆದುಕೊಂಡು ಭಿಕಾರಿಯಂತೆ ಅಲೆಯತೊಡಗಿದ. ಯಾವುದೋ ದೇವಸ್ಥಾನದಲ್ಲಿ ಬಡ-ಬಗ್ಗರಿಗೆಂದು ಅನ್ನದಾನ ಮಾಡುತ್ತಿದ್ದಾರೆಂದು ಕೇಳಿ ಅಲ್ಲಿಗೆ ಬಂದು ಸಾಲಿನಲ್ಲಿ ನಿಂತನು. ಅವನ ದುರಾದೃಷ್ಟದಿಂದ ಅವನ ಪಾಳಿ ಬರುವ ತನಕ ಅನ್ನ-ಸಾರೆಲ್ಲವೂ ಖಾಲಿ ಆಗಿಬಿಟ್ಟತ್ತು. ಅವನು ಸ್ವಲ್ಪವಾದರೂ ಅನ್ನ ಕೊಡೆಂದು ಗೋಗರೆದಾಗ ಬಡಿಸಲು ನಿಂತವನಿಗೆ ಕರುಣೆ ಬಂದು ಪಾತ್ರೆಯ ತಳವನ್ನು ಕೆರೆಸಿ ಚೂರು ಅನ್ನವನ್ನು ಜನಕನ ಬಟ್ಟಲಿಗೆ ಹಾಕಿದ.
 
ಇನ್ನೇನು ಆ ಅನ್ನವನು ಜನಕ ತಿನ್ನಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ಒಂದು ಹಕ್ಕಿ ಹಾರಿ ಬಂದು ಅವನ ಬಟ್ಟಲನ್ನು ಬೀಳಿಸಿಬಿಟ್ಟಿತು.
 
ದುಃಖದಿಂದ ಕಣ್ಣೀರನ್ನು ಹೇಗೋ ತಡೆಯುತ್ತಿರುವಾಗ ಜನಕನಿಗೆ ಎಚ್ಚರವಾಯಿತು.
 
ಅವನಿಗೆ ತಾನು ರಾಜನಾಗಿ ಸಕಲೈಶ್ವರ್ಯದಿಂದ ಮೆರೆಯುತ್ತಿರುವದು ನಿಜವೋ, ಅಥವಾ ಭಿಕಾರಿಯಾಗಿ ತುತ್ತು ಅನ್ನಕ್ಕಾಗಿ ಒದ್ದಾಡಿದ್ದು ನಿಜವೋ ಎಂದು ತಿಳಿಯದಾಯಿತು.
 
ಅವನ ಸಂಕಟದ ಸುದ್ದಿ ತಿಳಿದು ಅಷ್ಟಾವಕ್ರ ಅವನ ಸಹಾಯಕ್ಕೆಂದು ಬಂದು ಅವನಿಗೆ ಬೋಧನೆಯನ್ನು ಮಾಡಿದ. 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨