ಅಷ್ಟಾವಕ್ರಗೀತೆ ಅದ್ವೈತ ಸಿದ್ಧಾಂತದ ಪ್ರಮುಖ ಗ್ರಂಥವಾಗಿದೆ. ಇದನ್ನು ಅಷ್ಟಾವಕ್ರಮುನಿಯು ಮಿಥಿಲೆಯ ರಾಜನಾದ ಜನಕನಿಗೆ ಉಪದೇಶ ಮಾಡಿದನು. ಬಹುಶಃ ಇದರ ರಚನೆ ಭಗವದ್ಗೀತೆಯ ನಂತರ ಅಂದರೆ ಕ್ರಿ. ಪೂ. ೪೦೦-೩೦೦ ರಲ್ಲಿ ಆಗಿರಬಹುದು. ಅಷ್ಟಾವಕ್ರ ಋಷಿ ಯಾರೆಂಬುದರ ಬಗ್ಗೆ ಹೀಗೊಂದು ಕತೆ ಇದೆ. ಅರುಣಿ ಋಷಿಗೆ ಸುಜಾತಾ ಎಂಬ ಮಗಳಿದ್ದಳು. ಅವಳು ಕಹೋಡ ಎಂಬವನನ್ನು ಮದುವೆಯಾದಳು. ಗಂಡ-ಹೆಂಡತಿಯರಿಬ್ಬರೂ ಸದಾ ವೇದಶಾಸ್ತ್ರಗಳ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು. ಆದರೆ ಹೊಟ್ಟೆಪಾಡು ಬೇಕಲ್ಲ. ಕಹೋಡ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತಿರುತ್ತಿದ್ದ. ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಅವಳ ಹೊಟ್ಟೆಯಲ್ಲಿರುವ ಮಗುವೂ ಕೇಳುತ್ತಿತ್ತು. ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಈ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ." ಇದನ್ನು ಕೇಳಿದ ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟಿರದ ತನ್ನ ಸ್ವಂತ ಮಗುವಿಗೇ "ನೀನು ಅಷ್ಟಾವಕ್ರನಾಗಿ ಜನಿಸು" ಎಂದು ಶಾಪ ...
.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...