ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....