ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ  

ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ. 
 ಜನಕ ಉವಾಚ ..
ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ .
ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1.. 

ನಾನು ನಿಷ್ಕಳಂಕ, ಶಾಂತ ಮತ್ತು  ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ.

ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ .
ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2..

ಹೇಗೆ ನಾನು ಈ ಶರೀರಕ್ಕೆ ಬೆಳಕು ಕೊಡುವವನೋ - ಹಾಗೆಯೆ ನಾನು ಈ ಜಗತ್ತಿಗೆ ಬೆಳಕು ಕೊಡುವವನು. ಹಾಗಾಗಿ ಈ ಜಗತ್ತೆಲ್ಲ ನನ್ನದು. ಅಥವಾ ಯಾವುದೂ ನನ್ನದಲ್ಲ. (ಬೆಳಕಿಲ್ಲದೇ ಶರೀರ ಕಾಣಲಾರದು. ನಾನು ಶರೀರವನ್ನು ಬೆಳಕು ನೀಡಿ ಅದನ್ನು ಪ್ರಕಟಿಸುವವನು).

ಸ ಶರೀರಮಹೋ ವಿಶ್ವಂ ಪರಿತ್ಯಜ್ಯ ಮಯಾಧುನಾ .
ಕುತಶ್ಚಿತ್ ಕೌಶಲಾದ್ ಏವ ಪರಮಾತ್ಮಾ ವಿಲೋಕ್ಯತೇ .. 2-3..

ಈಗ ಈ ಶರೀರವನ್ನು ಹಾಗು ವಿಶ್ವವನ್ನು ಪರಿತ್ಯಜಿಸಿ, ಹೇಗೋ ಕೌಶಲ್ಯದಿಂದ ಪರಮಾತ್ಮನನ್ನು  ಕಲ್ಪಿಸಿಕೊಳ್ಳುತ್ತೇನೆ. (ಪರಮಾತ್ಮನ ರೂಪವನ್ನು ಅರಿಯುತ್ತೇನೆ.)

ಯಥಾ ನ ತೋಯತೋ ಭಿನ್ನಾಸ್ತರಂಗಾಃ ಫೇನಬುದ್ಬುದಾಃ .
ಆತ್ಮನೋ ನ ತಥಾ ಭಿನ್ನಂ ವಿಶ್ವಮಾತ್ಮವಿನಿರ್ಗತಂ .. 2-4..

ಹೇಗೆ ಅಲೆ, ನೊರೆ, ನೀರಿನ ಗುಳ್ಳೆ ಇವೆಲ್ಲವೂ ನೀರಿಗಿಂತ ಬೇರೆಯಲ್ಲವೋ (ನೀರಿಂದಲೇ ಅದ ಇವೆಲ್ಲ), ಹಾಗೆಯೇ ಆತ್ಮದಿಂದಲೇ ಉತ್ಪನ್ನವಾದ ಈ ವಿಶ್ವವು ಆತ್ಮದಿಂದ ಭಿನ್ನವಲ್ಲ. (ಮಡಿಕೆ ಮಣ್ಣಿನಿಂದ ಮಾಡಲ್ಪಟ್ಟಂತೆ, ಆತ್ಮದಿಂದ ಈ ವಿಶ್ವ ಮಾಡಲ್ಪಟ್ಟಿದೆ. ಹಾಗಾಗಿ ವಿಶ್ವವು ಆತ್ಮವೇ ಹೊರತು ಬೇರೇ ಏನೂ ಅಲ್ಲ.)

ತಂತುಮಾತ್ರೋ ಭವೇದ್ ಏವ ಪಟೋ ಯದ್ವದ್ ವಿಚಾರಿತಃ .
ಆತ್ಮತನ್ಮಾತ್ರಮೇವೇದಂ ತದ್ವದ್ ವಿಶ್ವಂ ವಿಚಾರಿತಂ .. 2-5..

(ಇನ್ನೊಂದು ಉದಾಹರಣೆ) ನಾವು ಪರಿಶೀಲಿಸಿ ನೋಡಿದಾಗ, ಬಟ್ಟೆಯು ನೂಲಲ್ಲದೆ ಇನ್ನೇನೂ ಅಲ್ಲ. ಅದೇ ರೀತಿ ವಿಚಾರ ಮಾಡಿ ನೋಡಿದಾಗ ಈ ವಿಶ್ವವು ಆತ್ಮವಲ್ಲದೆ ಬೇರೇನೂ ಅಲ್ಲ.

ಯಥೈವೇಕ್ಷುರಸೇ ಕ್ಲೃಪ್ತಾ ತೇನ ವ್ಯಾಪ್ತೈವ ಶರ್ಕರಾ .
ತಥಾ ವಿಶ್ವಂ ಮಯಿ ಕ್ಲೃಪ್ತಂ ಮಯಾ ವ್ಯಾಪ್ತಂ ನಿರಂತರಂ .. 2-6..

ಹೇಗೆ ಕಬ್ಬಿನಿಂದ ತಯಾರಾದ ಸಕ್ಕರೆಯು ಕಬ್ಬಿನಲ್ಲಿ ವ್ಯಾಪಿಸಿಕೊಂಡಿರುತ್ತದೆಯೋ, ಅದೇ ರೀತಿ ನನ್ನಿಂದ ಮಾಡಲ್ಪಟ್ಟ ವಿಶ್ವ ನನ್ನಿಂದಲೇ ವ್ಯಾಪಿಸಿಕೊಂಡಿದೆ.

ಆತ್ಮಾಜ್ಞಾನಾಜ್ಜಗದ್ ಭಾತಿ ಆತ್ಮಜ್ಞಾನಾನ್ನ ಭಾಸತೇ .
ರಜ್ಜ್ವಜ್ಞಾನಾದಹಿರ್ಭಾತಿ ತತ್ ಜ್ಞಾನಾದ್ ಭಾಸತೇ ನ ಹಿ .. 2-7..

ಅಜ್ಞಾನದಿಂದ ಹಗ್ಗವೂ ಹಾವಾಗಿ ಕಾಣುತ್ತದೆ. ಅದು ಹಗ್ಗ ಎಂದು ನಮಗೆ ತಿಳಿದಾಗಿ ಹಾವು ಮಾಯವಾಗಿ ಬಿಡುತ್ತದೆ. ಅದೇ ರೀತಿಯಲ್ಲಿ ಆತ್ಮದ ಬಗ್ಗೆ ಇರುವ ನಮ್ಮ ಅಜ್ಞಾನದಿಂದ ಜಗತ್ತು ಕಾಣಿಸುತ್ತದೆ. ಆತ್ಮ ಜ್ಞಾನ ಪ್ರಾಪ್ತಿಯಾದಾಗ ಜಗತ್ತು ಮಾಯವಾಗುತ್ತದೆ.

ಪ್ರಕಾಶೋ ಮೇ ನಿಜಂ ರೂಪಂ ನಾತಿರಿಕ್ತೋಽಸ್ಮ್ಯಹಂ ತತಃ .
ಯದಾ ಪ್ರಕಾಶತೇ ವಿಶ್ವಂ ತದಾಹಂ ಭಾಸ ಏವ ಹಿ .. 2-8..

ಪ್ರಕಾಶವೇ ನನ್ನ (ಆತ್ಮದ) ನಿಜ ಸ್ವರೂಪ. ನಾನು (ಆತ್ಮ) ಪ್ರಕಾಶಕ್ಕಿಂತ ಭಿನ್ನವಲ್ಲ. ವಿಶ್ವವು ಪ್ರಕಾಶಿಸುತ್ತಿರುವಾಗ ಅದು ನಾನೇ (ಆತ್ಮವೇ).

ಅಹೋ ವಿಕಲ್ಪಿತಂ ವಿಶ್ವಮಜ್ಞಾನಾನ್ಮಯಿ ಭಾಸತೇ .
ರೂಪ್ಯಂ ಶುಕ್ತೌ ಫಣೀ ರಜ್ಜೌ ವಾರಿ ಸೂರ್ಯಕರೇ ಯಥಾ .. 2-9..

ಅಜ್ಞಾನದಿಂದ ಹಗ್ಗ ಹಾವಾಗಿ, ಮರೀಚಿಕೆ ನೀರಾಗಿ, ಚಿಪ್ಪು ಬೆಳ್ಳಿಯಾಗಿ ಕಾಣುವಂತೆ, ವಿಶ್ವವು  ಅಜ್ಞಾನದಿಂದ ನನ್ನಲ್ಲಿ ಕಲ್ಪಿತವಾಗಿದೆ.

ಮತ್ತೋ ವಿನಿರ್ಗತಂ ವಿಶ್ವಂ ಮಯ್ಯೇವ ಲಯಮೇಷ್ಯತಿ .
ಮೃದಿ ಕುಂಭೋ ಜಲೇ ವೀಚಿಃ ಕನಕೇ ಕಟಕಂ ಯಥಾ .. 2-10..
ಮಡಿಕೆಯು ಮಣ್ಣಲ್ಲಿ, ಅಲೆಯು ನೀರಿನಲ್ಲಿ, ಬಳೆಯು ಸ್ವರ್ಣದಲ್ಲಿ ಲಯವಾಗುವಂತೆ, ನನ್ನಿಂದ ಉತ್ಪನ್ನವಾದ ಈ ವಿಶ್ವವು ನನ್ನಲ್ಲೇ ಲೀನವಾಗುತ್ತದೆ. 

ಅಹೋ ಅಹಂ ನಮೋ ಮಹ್ಯಂ ವಿನಾಶೋ ಯಸ್ಯ ನಾಸ್ತಿ ಮೇ .
ಬ್ರಹ್ಮಾದಿಸ್ತಂಬಪರ್ಯಂತಂ ಜಗನ್ನಾಶೋಽಪಿ ತಿಷ್ಠತಃ .. 2-11..

ಅಹೋ, ವಿನಾಶವಿಲ್ಲದ ನನಗೆ ನಮಿಸುತ್ತೇನೆ. ಬ್ರಹ್ಮನಿಂದ ಆರಂಭವಾಗಿ ತೃಣಕಾಷ್ಠದವರೆಗೆ ಎಲ್ಲವು ನಾಶವಾದರೂ ನಾನು (ಆತ್ಮ) ನಾಶವಾಗದೇ ಇರುತ್ತೇನೆ. 

ಅಹೋ ಅಹಂ ನಮೋ ಮಹ್ಯಮೇಕೋಽಹಂ ದೇಹವಾನಪಿ .
ಕ್ವಚಿನ್ನ ಗಂತಾ ನಾಗಂತಾ ವ್ಯಾಪ್ಯ ವಿಶ್ವಮವಸ್ಥಿತಃ .. 2-12..

ಅಹೋ,  ನನಗೆ ನಾನು ವಂದಿಸುತ್ತೇನೆ.  ಏಕನಾದ ನಾನು, ದೇಹ ಹೊಂದಿದವನಾದರೂ, ಎಲ್ಲೂ ಹೋಗದೇ, ಎಲ್ಲೂ ಬಾರದೇ, ವಿಶ್ವನ್ನೆಲ್ಲ ವ್ಯಾಪಿಸಿ, ಎಲ್ಲೆಲ್ಲೂ ವಾಸಿಸುತ್ತೇನೆ.

ಅಹೋ ಅಹಂ ನಮೋ ಮಹ್ಯಂ ದಕ್ಷೋ ನಾಸ್ತೀಹ ಮತ್ಸಮಃ .
ಅಸಂಸ್ಪೃಶ್ಯ ಶರೀರೇಣ ಯೇನ ವಿಶ್ವಂ ಚಿರಂ ಧೃತಂ .. 2-13..

 ನಾನು ನನಗೆ ವಂದಿಸುತ್ತೇನೆ. ನನ್ನಷ್ಟು ದಕ್ಷರು ಬೇರೆ ಯಾರೂ ಇಲ್ಲ. ಶರೀರದಿಂದ ಸ್ಪರ್ಶವನ್ನೇ ಮಾಡದೇ ನಾನು ಈ ವಿಶ್ವವನ್ನೇ ಚಿರಕಾಲದಿಂದ ಹಿಡಿದುಕೊಂಡಿದ್ದೇನೆ.

ಅಹೋ ಅಹಂ ನಮೋ ಮಹ್ಯಂ ಯಸ್ಯ ಮೇ ನಾಸ್ತಿ ಕಿಂಚನ .
ಅಥವಾ ಯಸ್ಯ ಮೇ ಸರ್ವಂ ಯದ್ ವಾಙ್ಮನಸಗೋಚರಂ .. 2-14..

ನನ್ನದು ಯಾವುದು ಅಲ್ಲ. ಅಥವಾ ವಾಕ್ ಮನಸ್ಸಿಗೆ ಗೋಚರಿಸುವದೆಲ್ಲವೂ ನನ್ನದೇ ಆಗಿದೆ. ಅಂತಹ ನನಗೆ ನಾನು ನಮಸ್ಕರಿಸುತ್ತೇನೆ.

ಜ್ಞಾನಂ ಜ್ಞೇಯಂ ತಥಾ ಜ್ಞಾತಾ ತ್ರಿತಯಂ ನಾಸ್ತಿ ವಾಸ್ತವಂ .
ಅಜ್ಞಾನಾದ್ ಭಾತಿ ಯತ್ರೇದಂ ಸೋಽಹಮಸ್ಮಿ ನಿರಂಜನಃ .. 2-15..

 ವಾಸ್ತವವಾಗಿ ನೋಡಿದರೆ ಜ್ಞಾನ, ಜ್ಞಾತ (ತಿಳಿಯಬೇಕಾದದ್ದು ) ಮತ್ತು  ಜ್ಞಾನಿ ಈ ಮೂರೂ ಇಲ್ಲವೇ ಇಲ್ಲ.  ಅಜ್ಞಾನದಿಂದ ನಿಷ್ಕಳಂಕನಾದ ನನ್ನಲ್ಲಿ ಈ ಮೂರೂ (ಜ್ಞಾನ, ಜ್ಞೇಯ ಮತ್ತು ಜ್ಞಾನಿ ) ಇದ್ದಂತೆ ಕಂಡು ಬರುತ್ತವೆ.

ದ್ವೈತಮೂಲಮಹೋ ದುಃಖಂ ನಾನ್ಯತ್ತಸ್ಯಾಽಸ್ತಿ ಭೇಷಜಂ .
ದೃಶ್ಯಮೇತನ್ ಮೃಷಾ ಸರ್ವಮೇಕೋಽಹಂ ಚಿದ್ರಸೋಮಲಃ .. 2-16..

ಎಲ್ಲಾ ದುಃಖಕ್ಕೆ ಮೂಲ ಕಾರಣ ದ್ವೈತ.  ಅದರ ಏಕೈಕ ಪರಿಹಾರವೆಂದರೆ,"ನಮಗೆ ಕಣ್ಣಿಗೆ ಕಾಣುವದೆಲ್ಲವು ಮಿಥ್ಯೆ, ನಾನೇ (ಆತ್ಮನೇ)  ನಿಷ್ಕಳಂಕನು,ಅದ್ವಿತೀಯನು ಮತ್ತು ಚಿನ್ಮಾತ್ರನು" ಎಂಬ ಸತ್ಯವನ್ನು ಅರಿಯುವದು.  

ಬೋಧಮಾತ್ರೋಽಹಮಜ್ಞಾನಾದ್ ಉಪಾಧಿಃ ಕಲ್ಪಿತೋ ಮಯಾ .
ಏವಂ ವಿಮೃಶತೋ ನಿತ್ಯಂ ನಿರ್ವಿಕಲ್ಪೇ ಸ್ಥಿತಿರ್ಮಮ .. 2-17..

ನಾನು ಶುದ್ಧ ಜ್ಞಾನಸ್ವರೂಪನು. ಅಜ್ಞಾನದಿಂದ ನನ್ನಿಂದ ಈ ಎಲ್ಲ ಉಪಾಧಿಗಳು (ಪದವಿಗಳು) (ನಾನು ಶರೀರ, ನಾನು ಅಂತವನು ಇತ್ಯಾದಿ)  ಕಲ್ಪಿತವಾಗಿವೆ. ಈ ಸತ್ಯವನ್ನು ನಿತ್ಯ ಮನನ ಮಾಡಿಕೊಳ್ಳುತ್ತ ನಾನು ನಿರ್ವಿಕಲ್ಪ ಸ್ಥಿತಿ ಅಂದರೆ ಬ್ರಹ್ಮ ಸ್ವರೂಪವನ್ನು ಹೊಂದುತ್ತೇನೆ.

ನ ಮೇ ಬಂಧೋಽಸ್ತಿ ಮೋಕ್ಷೋ ವಾ ಭ್ರಾಂತಿಃ ಶಾಂತಾ ನಿರಾಶ್ರಯಾ .
ಅಹೋ ಮಯಿ ಸ್ಥಿತಂ ವಿಶ್ವಂ ವಸ್ತುತೋ ನ ಮಯಿ ಸ್ಥಿತಂ .. 2-18..

ನನಗೆ ಬಂಧನವೂ ಇಲ್ಲ ಬಂಧನದಿಂದ ಮುಕ್ತಿಯೂ ಇಲ್ಲ. ಈ  ಭ್ರಾಂತಿ ಅದರ ಆಧಾರ ಕಳೆದುಕೊಂಡು ಸ್ತಬ್ಧವಾಗಿದೆ. ಈ ವಿಶ್ವವು ನನ್ನಲ್ಲೇ ಸ್ಥಿತವಾಗಿದ್ದರೂ. ವಾಸ್ತವವಾಗಿ ನೋಡಿದರೆ ಅದು ಇಲ್ಲ.

ಸಶರೀರಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಿತಂ .
ಶುದ್ಧಚಿನ್ಮಾತ್ರ ಆತ್ಮಾ ಚ ತತ್ಕಸ್ಮಿನ್ ಕಲ್ಪನಾಧುನಾ .. 2-19..

ಈ ಶರೀರ, ಈ ವಿಶ್ವ ಇವೆಲ್ಲ ಏನೂ ಅಲ್ಲ - ಬರಿ ಮಿಥ್ಯೆ. ಈ ಆತ್ಮವು ಶುದ್ಧ ಚಿತ್ಸ್ವರೂಪವೆಂದು ಅರಿತಾದ ಮೇಲೆ, ಇನ್ನು ಬೇರೆ ವಿಶ್ವದ  ಕಲ್ಪನೆ ಎಲ್ಲಿ ತಾನೇ ಇರುತ್ತದೆ?

ಶರೀರಂ ಸ್ವರ್ಗನರಕೌ ಬಂಧಮೋಕ್ಷೌ ಭಯಂ ತಥಾ .
ಕಲ್ಪನಾಮಾತ್ರಮೇವೈತತ್ ಕಿಂ ಮೇ ಕಾರ್ಯಂ ಚಿದಾತ್ಮನಃ .. 2-20..

ಶರೀರ, ಸ್ವರ್ಗ, ನರಕ, ಬಂಧನ, ಮೋಕ್ಷ, ಭಯ ಇವೆಲ್ಲವೂ ಬರಿ ಕಲ್ಪನೆಗಳೇ ಹೊರತು ಇನ್ನೇನೂ ಅಲ್ಲ. ನನ್ನ ನಿಜ ಸ್ವರೂಪವೇ ಚಿದಾತ್ಮವಾದಾಗ, ಇವೆಲ್ಲದಕ್ಕೂ ನನಗೂ ಏನು ಸಂಬಂಧ?

ಅಹೋ ಜನಸಮೂಹೇಽಪಿ ನ ದ್ವೈತಂ ಪಶ್ಯತೋ ಮಮ .
ಅರಣ್ಯಮಿವ ಸಂವೃತ್ತಂ ಕ್ವ ರತಿಂ ಕರವಾಣ್ಯಹಂ .. 2-21..

ನಾನು ಜನಸಮೂಹದಲ್ಲೂ ದ್ವೈತವನ್ನು ನೋಡುವದಿಲ್ಲ. ಜನ ಸಮೂಹದಲ್ಲಿದ್ದು ಅರಣ್ಯದಲ್ಲಿದ್ದಂತೆ ಭಾಸವಾಗುವಾಗ ನನಗೆ , ಆನಂದ ಎಲ್ಲಿ ಸಿಗುತ್ತದೆ??

ನಾಹಂ ದೇಹೋ ನ ಮೇ ದೇಹೋ ಜೀವೋ ನಾಹಮಹಂ ಹಿ ಚಿತ್ .
ಅಯಮೇವ ಹಿ ಮೇ ಬಂಧ ಆಸೀದ್ಯಾ ಜೀವಿತೇ ಸ್ಪೃಹಾ .. 2-22..

ನಾನು ದೇಹವಲ್ಲ. ಈ ದೇಹ ನನ್ನದಲ್ಲ. ನಾನು ಜೀವವಲ್ಲ. ನಾನು ಬರಿ ಚೈತನ್ಯ. ನನ್ನ ಜೀವನದ ಜೊತೆಗಿನ ನಂಟೇ ನನ್ನ ಬಂಧನದ ಕಾರಣವಾಗಿತ್ತು. 

ಅಹೋ ಭುವನಕಲ್ಲೋಲೈರ್ವಿಚಿತ್ರೈರ್ದ್ರಾಕ್ ಸಮುತ್ಥಿತಂ .
ಮಯ್ಯನಂತಮಹಾಂಭೋಧೌ ಚಿತ್ತವಾತೇ ಸಮುದ್ಯತೇ .. 2-23..

ಏನದ್ಭುತ, ನನ್ನ ಮನಸ್ಸಿನ ಮಹಾಸಾಗರದಲ್ಲಿ ಅಲೆಗಳು ಹುಟ್ಟಿದಾಗ ನಾನಾ ವಿಧದ ವಿಶ್ವಗಳು ಸ್ರಷ್ಟಿಯಾಗುತ್ತವೆ.

ಮಯ್ಯನಂತಮಹಾಂಭೋಧೌ ಚಿತ್ತವಾತೇ ಪ್ರಶಾಮ್ಯತಿ .
ಅಭಾಗ್ಯಾಜ್ಜೀವವಣಿಜೋ ಜಗತ್ಪೋತೋ ವಿನಶ್ವರಃ .. 2-24..

ದೌರ್ಭಗ್ಯದಿಂದ ನನ್ನ ಚಿತ್ತದ ಅನಂತ ಮಹಾಸಾಗರದಲ್ಲಿ ಚಿತ್ತವಾತಗಳು ಪ್ರಶಾಂತವಾದಾಗ ಜೀವನದ ವ್ಯಾಪಾರಿಗಳ ಜಗತ್ತು  ವಿನಾಶಿಸುತ್ತದೆ.

ಮಯ್ಯನಂತಮಹಾಂಭೋಧಾವಾಶ್ಚರ್ಯಂ ಜೀವವೀಚಯಃ .
ಉದ್ಯಂತಿ ಘ್ನಂತಿ ಖೇಲಂತಿ ಪ್ರವಿಶಂತಿ ಸ್ವಭಾವತಃ .. 2-25..

  ಎಷ್ಟು ಅದ್ಭುತ! ನನ್ನೆಂಬ ಅಪರಿಮಿತ ಸಾಗರದಲ್ಲಿ, ಜೀವಿಗಳ ಅಲೆಗಳು ಅವುಗಳ ಸ್ವಭಾವದಂತೆ ಏಳುತ್ತವೆ, ಡಿಕ್ಕಿ ಹೊಡೆಯುತ್ತವೆ, ಸ್ವಲ್ಪ   ಸಮಯದವರೆಗೆ ಆಟವಾಡುತ್ತವೆ, ನಂತರ ಕಣ್ಮರೆಯಾಗುತ್ತವೆ  .
 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩