ಅಷ್ಟಾವಕ್ರಗೀತಾ - ೧

ಅಷ್ಟಾವಕ್ರ ಗೀತೆ ಜನಕ ಮತ್ತು ಅಷ್ಟಾವಕ್ರನ ಸಂವಾದದ ರೂಪದಲ್ಲಿದೆ. ರಾಜಾ ಜನಕ ಅಷ್ಟಾವಕ್ರನನ್ನು ಮುಕ್ತಿಯನ್ನು ಪಡೆಯುವ ಮಾರ್ಗದ ಬಗ್ಗೆ ಕೇಳುತ್ತಾನೆ. ಅಷ್ಟಾವಕ್ರ ಅವನಿಗೆ ಅದನ್ನು ವಿವರಿಸುತ್ತಾನೆ

 .. ಶ್ರೀ ..
      ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ .
ಜನಕ ಉವಾಚ ..
ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ .
ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1..
ಜನಕ ಹೇಳಿದನು:
ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ,  ನನಗೆ ತಿಳಿಸಿಕೊಡಿ.
 ಅಷ್ಟಾವಕ್ರ ಉವಾಚ ..
ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ .
ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2..
ಅಷ್ಟಾವಕ್ರ ಹೇಳಿದನು:  
ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸಬೇಕು. ಕ್ಷಮೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಬೆಳೆಸಿಕೊಳ್ಳಬೇಕು.

ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ .
ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3..
ಮುಕ್ತಿ ಪಡೆಯಲು ನೀನು  ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ (ಪ್ರಜ್ಞೆಯ) ರೂಪನು ಎಂಬ ಮಾತನ್ನು ತಿಳಿದುಕೋ .
ಯದಿ ದೇಹಂ ಪೃಥಕ್ ಕೃತ್ಯ ಚಿತಿ ವಿಶ್ರಾಮ್ಯ ತಿಷ್ಠಸಿ .
ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ .. 1-4..
ನೀನು ನಿನ್ನನ್ನು  ದೇಹದಿಂದ ಬೇರ್ಪಡಿಸಿ ಪ್ರಜ್ಞೆಯಲ್ಲಿ ನಿನ್ನನ್ನು ಸ್ಥಾಪಿಸಿಕೊಂಡರೆ (ಧ್ಯಾನದ ಸಹಾಯದಿಂದ), ಈಗಿಂದೀಗಲೇ ನೀನು ಸುಖಿ, ಶಾಂತನು ಮತ್ತು ಬಂಧಮುಕ್ತನಾಗುತ್ತೀಯ.
ನ ತ್ವಂ ವಿಪ್ರಾದಿಕೋ ವರ್ಣೋ ನಾಶ್ರಮೀ ನಾಕ್ಷಗೋಚರಃ .
ಅಸಂಗೋಽಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ .. 1-5..
ನೀನು ಬ್ರಾಹ್ಮಣನಲ್ಲ, ಅಥವಾ ಬೇರೆ ಯಾವ ಜಾತಿ ವರ್ಣದವನಲ್ಲ, ಯಾವುದೇ ಆಶ್ರಮದವನಲ್ಲ (ಬ್ರಹ್ಮಚರ್ಯ, ಗ್ರಹಸ್ಥ ಇತ್ಯಾದಿ). ನೀನು ಇಂದ್ರಿಯಗಳ ಗ್ರಹಿಕೆಗೆ ಸಿಗುವವನಲ್ಲ. ನೀನು ಅಸಂಗನು ಹಾಗೂ ನಿರಾಕಾರ. ನೀನು ವಿಶ್ವದ- ಎಲ್ಲದರ ಸಾಕ್ಷಿ. (ಇದನ್ನು ತಿಳಿದು) ಸಂತೋಷದಿಂದಿರು.
ಧರ್ಮಾಧರ್ಮೌ ಸುಖಂ ದುಃಖಂ ಮಾನಸಾನಿ ನ ತೇ ವಿಭೋ .
ನ ಕರ್ತಾಸಿ ನ ಭೋಕ್ತಾಸಿ ಮುಕ್ತ ಏವಾಸಿ ಸರ್ವದಾ .. 1-6..
ಧರ್ಮಾಧರ್ಮಗಳು ಸುಖ ದುಃಖಗಳು ಬರಿ ಮನಸ್ಸಿಗೆ(ತಾಗುತ್ತವೆ), ನಿನಗಲ್ಲ. ಯಾಕೆಂದರೆ ನೀನು ಕರ್ಮಗಳ ಕರ್ತೃವೂ  ಅಲ್ಲ, ಅವುಗಳ ಫಲವನ್ನು ಅನುಭವಿಸುವವನೂ ಅಲ್ಲ. ನೀನು ಸದಾ ಮುಕ್ತನೇ ಆಗಿದ್ದೀಯ.
ಏಕೋ ದ್ರಷ್ಟಾಸಿ ಸರ್ವಸ್ಯ ಮುಕ್ತಪ್ರಾಯೋಽಸಿ ಸರ್ವದಾ .
ಅಯಮೇವ ಹಿ ತೇ ಬಂಧೋ ದ್ರಷ್ಟಾರಂ ಪಶ್ಯಸೀತರಂ .. 1-7.. 
ನೀನು ಎಲ್ಲವನ್ನು ನೋಡುವವ ಸಾಕ್ಷಿ ಮಾತ್ರ. (ಹಾಗಾಗಿ ) ನೀನು ಎಲ್ಲವುಗಳಿಂದ ಮುಕ್ತನು. ನಿನ್ನ ದಾಸ್ಯಕ್ಕೆ ಕಾರಣ ನೀನು ನೋಡುವವನನ್ನು(ಸಾಕ್ಷಿಯನ್ನು) ಬೇರೆಯವನು ಎಂದು ತಿಳಿದುಕೊಳ್ಳುವವದು.
ನಿನ್ನನ್ನು ನೀನು ನಾನು ಸಾಕ್ಷಿ ಎಂದು ತಿಳಿದುಕೊಳ್ಳದೇ, ನಾನು ಕರ್ತೃ, ನಾನು ಭೋಗಿಸುವವನು ಎಂಬ ಭ್ರಮೆಯಿಂದ ಸಂಸಾರ ಬಂಧನಕ್ಕೊಳಗಾಗುತ್ತೀಯ.
ಅಹಂ ಕರ್ತೇತ್ಯಹಂಮಾನಮಹಾಕೃಷ್ಣಾಹಿದಂಶಿತಃ .
ನಾಹಂ ಕರ್ತೇತಿ ವಿಶ್ವಾಸಾಮೃತಂ ಪೀತ್ವಾ ಸುಖೀ ಭವ .. 1-8..
 ನಾನೇ ಎಲ್ಲದರ ಕರ್ತೃ ಎಂಬ ಭ್ರಮೆ ನಿನ್ನನ್ನು ಕಾಳಸರ್ಪದಂತೆ ಕಚ್ಚುತ್ತಿದೆ. ನಾನು ಕರ್ತೃವಲ್ಲ ಎಂಬ ವಿಶ್ವಾಸದ ಅಮೃತವನ್ನು ಕುಡಿದು ಸಂತೋಷದಿಂದಿರು.
ಏಕೋ ವಿಶುದ್ಧಬೋಧೋಽಹಮಿತಿ ನಿಶ್ಚಯವಹ್ನಿನಾ .
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕಃ ಸುಖೀ ಭವ .. 1-9..
ನಾನು ಪರಿಶುದ್ಧ ಪ್ರಜ್ಞೆ ಮಾತ್ರ ಎಂಬ ತಿಳುವಳಿಕೆಯ ಅಗ್ನಿಯಿಂದ ಅಜ್ಞಾನದ ಅರಣ್ಯವನ್ನು ದಹಿಸಿಬಿಡು ಮತ್ತು ಶೋಕವನ್ನು ಬಿಟ್ಟು ಸುಖಿಯಾಗು.
ಯತ್ರ ವಿಶ್ವಮಿದಂ ಭಾತಿ ಕಲ್ಪಿತಂ ರಜ್ಜುಸರ್ಪವತ್ .
ಆನಂದಪರಮಾನಂದಃ ಸ ಬೋಧಸ್ತ್ವಂ ಸುಖಂ ಭವ .. 1-10..
ನಾವು ಹಗ್ಗವನ್ನು ಹಾವೆಂದು ಕಲ್ಪಿಸಿಕೊಳ್ಳುವ ಭ್ರಮೆಯಂತೆ, ಈ ವಿಶ್ವವೆಲ್ಲವೂ  ನಿನ್ನ ಕಲ್ಪನೆ, ಬರೀ ಭ್ರಮೆ. (ಇದನ್ನು ತೊರೆದು) ನೀನು ಪ್ರಜ್ಞೆ ಮಾತ್ರ ಎಂಬುದನ್ನು ತಿಳಿದು ಸುಖದಿಂದಿರು.
ಮುಕ್ತಾಭಿಮಾನೀ ಮುಕ್ತೋ ಹಿ ಬದ್ಧೋ ಬದ್ಧಾಭಿಮಾನ್ಯಪಿ .
ಕಿಂವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್ .. 1-11..  
ಯಾರು ತಾನು ಮುಕ್ತನೆಂದು ತಿಳಿದುಕೊಳ್ಳುತ್ತಾನೋ, ಅವನು ಮುಕ್ತನು. ಯಾರು ತಾನು ಬಂಧಿತನು ಎಂದು ಯೋಚಿಸುತ್ತಾನೋ, ಅವನು ಬಂಧಿತನು. “ಹೇಗೆ ಮತಿಯೋ, ಹಾಗೇ ಗತಿ” ಎಂಬ ಹೇಳಿಕೆಯು ನಿಜ.
ಆತ್ಮಾ ಸಾಕ್ಷೀ ವಿಭುಃ ಪೂರ್ಣ ಏಕೋ ಮುಕ್ತಶ್ಚಿದಕ್ರಿಯಃ .  
ಅಸಂಗೋ ನಿಃಸ್ಪೃಹಃ ಶಾಂತೋ ಭ್ರಮಾತ್ಸಂಸಾರವಾನಿವ .. 1-12..  
ನೀನು ನಿಜವಾಗಿ ಸರ್ವವ್ಯಾಪಿ, ಪೂರ್ಣನು, ಅಕ್ರಿಯ ಆತ್ಮನು, ಸಾಕ್ಷಿಯು. ನೀನು ನಿಸ್ಸಂಗಿ, ಆಸೆಯಿಲ್ಲದ ಶಾಂತ ಆತ್ಮನು.  ಮಾಯೆಯಿಂದ ನಿನಗೆ ಸಂಸಾರದಲ್ಲಿ ಇರುವಂತೆ ಭ್ರಮೆಯಾಗುತ್ತದೆ.
ಕೂಟಸ್ಥಂ ಬೋಧಮದ್ವೈತಮಾತ್ಮಾನಂ ಪರಿಭಾವಯ .
ಆಭಾಸೋಽಹಂ ಭ್ರಮಂ ಮುಕ್ತ್ವಾ ಭಾವಂ ಬಾಹ್ಯಮಥಾಂತರಂ .. 1-13..
ನೀನು ಶರೀರ, ನೀನು ಬುದ್ಧಿ ಎಂಬ ಬಾಹ್ಯ ಅಥವಾ ಅಂತರಂಗದ ಆಭಾಸಗಳನ್ನು ಹಾಗೂ ಭ್ರಮೆಯನ್ನು ಬಿಟ್ಟು, ನೀನು ಅಚಲ, ಚಿತ್ ರೂಪಿ, ಅದ್ವೈತ ಆತ್ಮನೆಂದು ತಿಳಿ.
ದೇಹಾಭಿಮಾನಪಾಶೇನ ಚಿರಂ ಬದ್ಧೋಽಸಿ ಪುತ್ರಕ .
ಬೋಧೋಽಹಂ ಜ್ಞಾನಖಡ್ಗೇನ ತನ್ನಿಕೃತ್ಯ ಸುಖೀ ಭವ .. 1-14..
ಪುತ್ರಾ, ದೇಹದ ಅಭಿಮಾನವೆಂಬ ಹಗ್ಗದಿಂದ ಚಿರಕಾಲದಿಂದ ನೀನು ಬಂಧಿತನಾಗಿರುವೆ. ನಾನು “ಪ್ರಜ್ಞೆ” ಎನ್ನುವ ಜ್ಞಾನದ ಖಡ್ಗದಿಂದ ಅದನ್ನು (ಆ ಹಗ್ಗವನ್ನು) ಕತ್ತರಿಸಿ, ಸುಖಿಯಾಗು.
ನಿಃಸಂಗೋ ನಿಷ್ಕ್ರಿಯೋಽಸಿ ತ್ವಂ ಸ್ವಪ್ರಕಾಶೋ ನಿರಂಜನಃ .
ಅಯಮೇವ ಹಿ ತೇ ಬಂಧಃ ಸಮಾಧಿಮನುತಿಷ್ಠತಿ .. 1-15..
ನೀನು ಸಂಗರಹಿತ, ನಿಷ್ಕ್ರಿಯ, ಸ್ವಪ್ರಕಾಶಿತ, ನಿಷ್ಕಳಂಕ. ನೀನು ಇನ್ನೂ ಸಮಾಧಿಯ ಪ್ರಯತ್ನ ಮಾಡುತ್ತಿರುವದೇ ನಿನ್ನ ಬಂಧನ. (ನೀನು ಈಗಾಗಲೇ ನಿರ್ವಿಕಲ್ಪ, ನಿರಾಕಾರ ಆತ್ಮನಾಗಿರುವಾಗ, ಧ್ಯಾನ,ಸಮಾಧಿ ಇತ್ಯಾದಿ ಪ್ರಯತ್ನಗಳನ್ನು ಮಾಡುವ ಅವಶ್ಯಕತೆ ಎಲ್ಲಿದೆ?)
ತ್ವಯಾ ವ್ಯಾಪ್ತಮಿದಂ ವಿಶ್ವಂ ತ್ವಯಿ ಪ್ರೋತಂ ಯಥಾರ್ಥತಃ .
ಶುದ್ಧಬುದ್ಧಸ್ವರೂಪಸ್ತ್ವಂ ಮಾ ಗಮಃ ಕ್ಷುದ್ರಚಿತ್ತತಾಂ .. 1-16..
ಈ ವಿಶ್ವ ನಿನ್ನಿಂದಲೇ ವ್ಯಾಪಿಸಿಕೊಂಡಿದೆ. ಇದು ನಿನ್ನೊಳಗೇ ನೇಯಲ್ಪಟ್ಟಿದೆ. ಶುದ್ಧ ಚೇತನ ಸ್ವರೂಪ ನೀನು. ಹಾಗಾಗಿ ಸಣ್ಣ ಮನಸ್ಸಿನವನಾಗಬೇಡ(ನಿನ್ನ ನೈಜ ಸ್ವರೂಪವನ್ನು ಮರೆತು).
 ನಿರಪೇಕ್ಷೋ ನಿರ್ವಿಕಾರೋ ನಿರ್ಭರಃ ಶೀತಲಾಶಯಃ .
ಅಗಾಧಬುದ್ಧಿರಕ್ಷುಬ್ಧೋ ಭವ ಚಿನ್ಮಾತ್ರವಾಸನಃ .. 1-17..
ನೀನು ಸಂಪೂರ್ಣನು, ನಿರ್ವಿಕಾರ, ಆಕಾರರಹಿತನು, ಶಾಂತಚಿತ್ತನು, ಅಗಾಧಬುದ್ಧಿಯುಳ್ಳವನೂ, ಪ್ರಶಾಂತನು ಆಗಿರುವೆ. ನೀನು ಜ್ಞಾನದಲ್ಲಿ ಮಾತ್ರ ಆಸಕ್ತನಾಗು.
ಸಾಕಾರಮನೃತಂ ವಿದ್ಧಿ ನಿರಾಕಾರಂ ತು ನಿಶ್ಚಲಂ .
ಏತತ್ತತ್ತ್ವೋಪದೇಶೇನ ನ ಪುನರ್ಭವಸಂಭವಃ .. 1-18..
 ಸಾಕಾರವು ಸುಳ್ಳೆಂಬುದನ್ನು ತಿಳಿ. ನಿರಾಕಾರವು ನಿಶ್ಚಲ. ಈ ತತ್ವದ ಮೂಲಕ ನೀನು ಜನ್ಮಮೃತ್ಯುಗಳ ಚಕ್ರದಿಂದ ಮುಕ್ತನಾಗಬಹುದು.
ನಮ್ಮನ್ನು ನಾವು ಸಾಕಾರ(ಸ+ಆಕಾರ)ವೆಂದು - ನಮ್ಮ ದೇಹವೆಂದು ತಿಳಿದುಕೊಂಡು ಸಂಸಾರ ಜಾಲದಲ್ಲಿ ಸಿಲುಕಿ ನಿರಂತರ ಜನ್ಮ-ಮೃತ್ಯಗಳ ಚಕ್ರದಲ್ಲಿ ಸುತ್ತುತ್ತೇವೆ. ನಾವು ಕೇವಲ ನಿರಾಕಾರವಾದ ಆತ್ಮ ಎಂದು ಅರಿತಾಗ, ಭ್ರಮೆಗಳೆಲ್ಲಾ ಹರಿದು ಮುಕ್ತರಾಗುತ್ತೇವೆ.
 ಯಥೈವಾದರ್ಶಮಧ್ಯಸ್ಥೇ ರೂಪೇಽನ್ತಃ ಪರಿತಸ್ತು ಸಃ .
 ತಥೈವಾಽಸ್ಮಿನ್ ಶರೀರೇಽನ್ತಃ ಪರಿತಃ ಪರಮೇಶ್ವರಃ .. 1-19
 ಹೇಗೆ ಕನ್ನಡಿಯು ತನ್ನೊಳಗಿನ ಪ್ರತಿಬಿಂಬವಿದ್ದಾಗಲೂ ಇರುತ್ತದೆ ಹಾಗೂ ಯಾವುದೇ ಪ್ರತಿಬಿಂಬವಿಲ್ಲದಿದ್ದಾಗಲೂ ಇರುತ್ತದೆಯೋ, ಹಾಗೇ, ಪರಮೇಶ್ವರನು ಶರೀರದ ಒಳಗೆ ಹಾಗೂ ಹೊರಗೂ ಸಹ ಇರುತ್ತಾನೆ.
ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬ ಮಿಥ್ಯೆ. ಕೇವಲ ಕನ್ನಡಿ ಮಾತ್ರ ಸತ್ಯ, ಪ್ರತಿಬಿಂಬವಿಲ್ಲದಿದ್ದರೂ ಕನ್ನಡಿ ಮಾತ್ರ ಯಾವಾಗಲೂ ಇರುತ್ತದೆ. ಹಾಗೆಯೇ ನಮ್ಮ ದೇಹ, ಮನಸ್ಸು ಇವೆಲ್ಲ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದ ಹಾಗೆಯೇ ಮಿಥ್ಯೆ- ಕೇವಲ ಆತ್ಮ ಮಾತ್ರ ಸತ್ಯ.
ಏಕಂ ಸರ್ವಗತಂ ವ್ಯೋಮ ಬಹಿರಂತರ್ಯಥಾ ಘಟೇ .
ನಿತ್ಯಂ ನಿರಂತರಂ ಬ್ರಹ್ಮ ಸರ್ವಭೂತಗಣೇ ತಥಾ .. 1-20..
ಹೇಗೆ ಒಂದೇ ಅನಂತ ಸರ್ವವ್ಯಾಪಿ ಆಕಾಶವು ಮಡಿಕೆಯೊಳಗಿನ ಪ್ರತಿಬಿಂಬದಲ್ಲಿದ್ದಂತೆ, ಅದರ ಹೊರಗೂ ಇರುವದೋ, ಹಾಗೆಯೇ ನಿತ್ಯ ನಿರಂತರ ಬ್ರಹ್ಮನು ಸರ್ವಭೂತಗಳಲ್ಲೂ ಅಡಗಿದ್ದಾನೆ. 

Comments

Popular posts from this blog

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨