ಸಂತೋಷ ಜನಕ ಉವಾಚ- ಅಕಿಂಚನಭವಂ ಸ್ವಾಸ್ಥ್ಯಂ ಕೌಪೀನತ್ವೇಽಪಿ ದುರ್ಲಭಂ . ತ್ಯಾಗಾದಾನೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೧.. ರಾಜಾ ಜನಕನು ತನ್ನ ಸ್ಥಿತಿಯನ್ನು ವಿವರಿಸುತ್ತ ಹೀಗೆ ಮುಂದುವರಿಸುತ್ತಾನೆ. (ಆತ್ಮದ ಹೊರತು)ಇನ್ನೇನೂ ಇಲ್ಲ ಎಂಬ ಭಾವನೆ, ಆ ವೈರಾಗ್ಯ, ಕೌಪೀನಧಾರಿಯಾದರೂ (ಎಲ್ಲ ತ್ಯಜಿಸಿ ಕೌಪೀನ ಮಾತ್ರ ಧರಿಸಿದರೂ) ದೊರಕುವದು ದುರ್ಲಭ. ಆದ್ದರಿಂದ ನಾನು ತ್ಯಾಗವನ್ನೂ, ಸ್ವೀಕರಿಸುವದನ್ನೂ ಎರಡನ್ನು ಬಿಟ್ಟು ಸುಖದಿಂದಿದ್ದೇನೆ. ಕುತ್ರಾಪಿ ಖೇದಃ ಕಾಯಸ್ಯ ಜಿಹ್ವಾ ಕುತ್ರಾಪಿ ಖಿದ್ಯತೇ . ಮನಃ ಕುತ್ರಾಪಿ ತತ್ತ್ಯಕ್ತ್ವಾ ಪುರುಷಾರ್ಥೇ ಸ್ಥಿತಃ ಸುಖಂ .. ೧೩-೨.. ಎಲ್ಲೋ ಒಂದೆಡೆ ಶರೀರದ ಬಾಧೆ (ಸಾಧನೆ ಮಾಡುವಾಗ), ಇನ್ನೆಲ್ಲೋ ಒಂದು ಕಡೆ ನಾಲಿಗೆಯ ಬಾಧೆ (ಶಾಸ್ತ್ರಗಳ ವಾಚನ ಮಾಡುವಾಗ), ಮತ್ತೆಲ್ಲೋ ಒಂದೆಡೆ ಮನಸ್ಸಿನ ಬಾಧೆ (ಧ್ಯಾನ ಮಾಡುವಾಗ), ಈ ಎಲ್ಲ ಬಾಧೆಗಳನ್ನೂ ತ್ಯಜಿಸಿ ನಾನು ಪುರುಷಾರ್ಥದಲ್ಲಿ ಸುಖವಾಗಿದ್ದೇನೆ. ಮನಸ್ಸು, ಶರೀರಗಳನ್ನು ತಪಸ್ಸಿನಲ್ಲಿ ತೊಡಗಿಸಿದಾಗ ನೋವು, ಬಾಧೆಗಳು ಸಹಜ. ಆದರೆ ಅವೆಲ್ಲವೂ ನನಗಲ್ಲ ಎಂಬ ನಿರಾಳತೆಯಿಂದ ಸುಖದಲ್ಲಿ ಇರುತ್ತೇನೆ. ಕೃತಂ ಕಿಮಪಿ ನೈವ ಸ್ಯಾದ್ ಇತಿ ಸಂಚಿಂತ್ಯ ತತ್ತ್ವತಃ . ಯದಾ ಯತ್ಕರ್ತುಮಾಯಾತಿ ತತ್ ಕೃತ್ವಾಸೇ ಯಥಾಸುಖಂ .. ೧೩-೩.. ತತ್ವಶ: ನೋಡಿದರೆ, ಯಾವ ಕರ್ಮವೂ ಆತ್ಮನಿಂದ ಕೃತವಲ್ಲ (ಎಲ್ಲ ಶರೀರ, ಮನ, ಬುದ್ಧಿಗಳು ಮಾಡಿದ್ದು - ಆತ್ಮವಲ್ಲ...