ಆತ್ಮಜ್ಞಾನದ ಅವಲೋಕನ
ಅಷ್ಟಾವಕ್ರ ಉವಾಚ ..
ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ .
ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..
ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ವ್ಯಕ್ತಿಯು, ಸಂಪತ್ತಿನ ಗಳಿಕೆಯಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ?ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ .
ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2..
ಕಪ್ಪೆಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಯಿಂದ ಮೋಹವಾಗುವಂತೆ, ಆತ್ಮದ ಅಜ್ಞಾನವು ಭ್ರಮೆಯ ಬಯಕೆಯನ್ನು (ಕಾಣುವ ವಸ್ತುಗಳಲ್ಲಿ) ಉಂಟುಮಾಡುತ್ತದೆ.
ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ .
ಸೋಽಹಮಸ್ಮೀತಿ ವಿಜ್ಞಾಯ ಕಿಂ ದೀನ ಇವ ಧಾವಸಿ .. 3-3..
ಯಾರಲ್ಲಿ ಬ್ರಹ್ಮಾಂಡವು ಸಮುದ್ರದ ಮೇಲಿನ ಅಲೆಗಳಂತೆ ಕಾಣಿಸುವದೋ ಅವನೇ ನೀನು ಎಂದು ತಿಳಿದಿದ್ದರೂ, ನೀನು ಯಾಕೆ ದೀನನಂತೆ ಓಡುತ್ತೀಯ?
ಶ್ರುತ್ವಾಪಿ ಶುದ್ಧಚೈತನ್ಯ ಆತ್ಮಾನಮತಿಸುಂದರಂ .
ಉಪಸ್ಥೇಽತ್ಯಂತಸಂಸಕ್ತೋ ಮಾಲಿನ್ಯಮಧಿಗಚ್ಛತಿ .. 3-4..
ನೀನು ಶುದ್ಧ ಚೈತನ್ಯನೆಂದೂ, ಅತಿ ಸುಂದರನೆಂದೂ ಕೇಳಿ ತಿಳಿದಮೇಲೂ, ಮಲಿನವಾದ ವಿಷಯಸುಖಗಳಲ್ಲಿ ಯಾಕೆ ಆಸಕ್ತಿ ತೋರಿಸುತ್ತಿರುವೆ? (ಇನ್ನೊಂದು ಅನುವಾದ - ತಾನು ಆತ್ಮ, ಶುದ್ಧ ಪ್ರಜ್ಞೆ ಮತ್ತು ಅತ್ಯಂತ ಸುಂದರ ಎಂದು ಕೇಳಿದ ನಂತರವೂ, ದೇಹಕ್ಕೆ ಅತಿಯಾಗಿ ಅಂಟಿಕೊಂಡಿರುವವನು ಮಾಲಿನ್ಯವನ್ನು ಪಡೆಯುತ್ತಾನೆ.)
ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ .
ಮುನೇರ್ಜಾನತ ಆಶ್ಚರ್ಯಂ ಮಮತ್ವಮನುವರ್ತತೇ .. 3-5..
ಸರ್ವಭೂತಗಳಲ್ಲೂ ತಾನು ಇರುವಾಗ, ತನ್ನಲ್ಲಿ ಸರ್ವಭೂತಗಳೂ ಇರುವಾಗ ಅದನ್ನು ತಿಳಿದು ಕೂಡ ಮುನಿಯು ಮಮತ್ವವನ್ನು (ನಾನು, ನನ್ನದು ಎಂಬ ಮೋಹ) ಇನ್ನೂ ಉಳಿಸಿಕೊಳ್ಳುವದು ಆಶ್ಚರ್ಯವೇ.
ಆಸ್ಥಿತಃ ಪರಮಾದ್ವೈತಂ ಮೋಕ್ಷಾರ್ಥೇಽಪಿ ವ್ಯವಸ್ಥಿತಃ .
ಆಶ್ಚರ್ಯಂ ಕಾಮವಶಗೋ ವಿಕಲಃ ಕೇಲಿಶಿಕ್ಷಯಾ .. 3-6..
ಪರಮ ಅದ್ವೈತದಲ್ಲಿ ಸ್ಥಿತನಾಗಿ, ಮೋಕ್ಷಾರ್ಥವನ್ನು ಪಡೆಯುವ ಪ್ರಯತ್ನದಲ್ಲಿರುವವನೂ ಸಹ ಕಾಮದ ಪಾಶದಿಂದ, ನಾನಾ ರೀತಿಯ ವಿಷಯ ವಿಕಾರಗಳಿಂದ ದುರ್ಬಲನಾಗುವದು ನಿಜಕ್ಕೂ ಆಶ್ಚರ್ಯವೇ.
ಉದ್ಭೂತಂ ಜ್ಞಾನದುರ್ಮಿತ್ರಮವಧಾರ್ಯಾತಿದುರ್ಬಲಃ .
ಆಶ್ಚರ್ಯಂ ಕಾಮಮಾಕಾಂಕ್ಷೇತ್ ಕಾಲಮಂತಮನುಶ್ರಿತಃ .. 3-7..
ಈಗಾಗಲೇ ದುರ್ಬಲನಾದ ಮನುಷ್ಯನು, ಕಾಮವು ಜ್ಞಾನದ ಶತ್ರುವೆಂದು ಅರಿತಿದ್ದರೂ, ಅಂತಿಮ ಕಾಲ ಹತ್ತಿರ ಬರುತ್ತಿದ್ದರೂ ಸಹ, ಕಾಮಕಾಂಕ್ಷಿಯಾಗುವದು ಆಶ್ಚರ್ಯವೇ ಸರಿ. ಇಹಾಮುತ್ರ ವಿರಕ್ತಸ್ಯ ನಿತ್ಯಾನಿತ್ಯವಿವೇಕಿನಃ .
ಆಶ್ಚರ್ಯಂ ಮೋಕ್ಷಕಾಮಸ್ಯ ಮೋಕ್ಷಾದ್ ಏವ ವಿಭೀಷಿಕಾ .. 3-8..
ಇಹ-ಪರಗಳಲ್ಲಿ ವಿರಕ್ತನಾದವನು, ನಿತ್ಯಾನಿತ್ಯಗಳ ವಿವೇಕವನ್ನು ತಿಳಿದವನು, ಮೋಕ್ಷದ ವಾಂಛೆಯನ್ನು ಹೊಂದಿರುವವನು, ಮೋಕ್ಷದಿಂದಲೇ ಭಯ-ಭೀತನಾಗುವದು ಆಶ್ಚರ್ಯವೇ ಸರಿ.
ಧೀರಸ್ತು ಭೋಜ್ಯಮಾನೋಽಪಿ ಪೀಡ್ಯಮಾನೋಽಪಿ ಸರ್ವದಾ .
ಆತ್ಮಾನಂ ಕೇವಲಂ ಪಶ್ಯನ್ ನ ತುಷ್ಯತಿ ನ ಕುಪ್ಯತಿ .. 3-9..
ಧೀರನಾದರೋ ಭೋಗದಲ್ಲಿದ್ದರೂ, ಅಥವಾ ಪೀಡೆಯಲ್ಲಿದ್ದರೂ, ಕೇವಲ ಆತ್ಮವನ್ನಷ್ಟೇ ನೋಡುತ್ತಾ, ಸಂತಸ ಪಡುವದೂ ಇಲ್ಲ, ಕೋಪಿಸಿಕೊಳ್ಳುವದೂ ಇಲ್ಲ. ಚೇಷ್ಟಮಾನಂ ಶರೀರಂ ಸ್ವಂ ಪಶ್ಯತ್ಯನ್ಯಶರೀರವತ್ .
ಸಂಸ್ತವೇ ಚಾಪಿ ನಿಂದಾಯಾಂ ಕಥಂ ಕ್ಷುಭ್ಯೇತ್ ಮಹಾಶಯಃ .. 3-10..
ತನ್ನ ಶರೀರವನ್ನು ಅನ್ಯರ ಶರೀರದಂತೆ ಭಾವಿಸಿ ಸಾಕ್ಷಿಯಂತೆ ನೋಡುತ್ತಿರುವ ಮಹಾನುಭಾವನು, ಹೊಗಳುವಿಕೆಯಿಂದ ಅಥವಾ ನಿಂದೆಯಿಂದ, ಹೇಗೆ ತಾನೇ ಕ್ಷೋಭೆಗೊಳ್ಳುತ್ತಾನೆ?
ಮಾಯಾಮಾತ್ರಮಿದಂ ವಿಶ್ವಂ ಪಶ್ಯನ್ ವಿಗತಕೌತುಕಃ .
ಅಪಿ ಸನ್ನಿಹಿತೇ ಮೃತ್ಯೌ ಕಥಂ ತ್ರಸ್ಯತಿ ಧೀರಧೀಃ .. 3-11..
ಈ ವಿಶ್ವವೇ ಬರೀ ಮಾಯೆಯೆಂದು ತಿಳಿದು, ಯಾವ ಆಸಕ್ತಿಯನ್ನೂ ಹೊಂದದೇ ಇರುವ ಧೀರ ಮಾನವನು, ಮೃತ್ಯುವು ಸನಿಹವಾದಾಗ ಕೂಡ ಹೇಗೆ ತಾನೇ ಭಯಪಡುತ್ತಾನೆ?ನಿಃಸ್ಪೃಹಂ ಮಾನಸಂ ಯಸ್ಯ ನೈರಾಶ್ಯೇಽಪಿ ಮಹಾತ್ಮನಃ .
ತಸ್ಯಾತ್ಮಜ್ಞಾನತೃಪ್ತಸ್ಯ ತುಲನಾ ಕೇನ ಜಾಯತೇ .. 3-12..
ಯಾವ ಮಹಾತ್ಮನು ನಿರಾಶೆಯಲ್ಲೂ ಸಹ ಸ್ಥಿತಪ್ರಜ್ಞನಾಗಿರುತ್ತಾನೋ, ಆತ್ಮಜ್ಞಾನದಿಂದ ತೃಪ್ತನಾಗಿರುತ್ತಾನೋ, ಅಂತಹವನನ್ನು ಯಾರಿಗೂ ಹೋಲಿಸಲಾಗುವದಿಲ್ಲ.
ಸ್ವಭಾವಾದ್ ಏವ ಜಾನಾನೋ ದೃಶ್ಯಮೇತನ್ನ ಕಿಂಚನ .
ಇದಂ ಗ್ರಾಹ್ಯಮಿದಂ ತ್ಯಾಜ್ಯಂ ಸ ಕಿಂ ಪಶ್ಯತಿ ಧೀರಧೀಃ .. 3-13..
ಸ್ಥಿತಪ್ರಜ್ಞನಾದ ಧೀರನು, ಸಕಲ ವಿಶ್ವವೆಲ್ಲವು ಶೂನ್ಯವೆಂದು ತಿಳಿದವನಾಗಿರುವದರಿಂದ, ಇದನ್ನು ಗ್ರಹಿಸಬೇಕು, ಅದನ್ನು ತ್ಯಜಿಸಬೇಕು ಎಂದು ಯಾಕೆ ಯೋಚಿಸುತ್ತಾನೆ?
ಅಂತಸ್ತ್ಯಕ್ತಕಷಾಯಸ್ಯ ನಿರ್ದ್ವಂದ್ವಸ್ಯ ನಿರಾಶಿಷಃ .
ಯದೃಚ್ಛಯಾಗತೋ ಭೋಗೋ ನ ದುಃಖಾಯ ನ ತುಷ್ಟಯೇ .. 3-14..
ಆಂತರಿಕವಾಗಿ ಕಲ್ಮಶಗಳಿಂದ, ದ್ವಂದ್ವಗಳಿಂದ ಮತ್ತು ಬಯಕೆಗಳಿಂದ ಮುಕ್ತನಾದವನಿಗೆ, ಆಕಸ್ಮಿಕವಾಗಿ ಬರುವ ಯಾವುದೇ ಅನುಭವವು ದುಃಖವನ್ನು ಉಂಟುಮಾಡುವುದಿಲ್ಲ ಅಥವಾ ತೃಪ್ತಿಯನ್ನು ತರುವುದಿಲ್ಲ.
Comments
Post a Comment