ಅಷ್ಟಾವಕ್ರ ಉವಾಚ .. ಯಸ್ಯ ಬೋಧೋದಯೇ ತಾವತ್ಸ್ವಪ್ನವದ್ ಭವತಿ ಭ್ರಮಃ . ತಸ್ಮೈ ಸುಖೈಕರೂಪಾಯ ನಮಃ ಶಾಂತಾಯ ತೇಜಸೇ .. ೧೮-೧.. ಯಾರಿಗೆ ಜ್ಞಾನೋದಯದಿಂದ ಮಾಯಾ-ಮೋಹಗಳು ಸ್ವಪ್ನದಂತಾಗುವವೋ (ಸ್ವಪ್ನದಂತೆ ಮಿಥ್ಯೆಯಾಗುವವೋ), ಅಂತಹ ಸುಖ ಏಕರೂಪಿ, ಶಾಂತರೂಪಿ ತೇಜಸ್ವಿಗೆ ನಮಸ್ಕಾರಗಳು. ಅರ್ಜಯಿತ್ವಾಖಿಲಾನ್ ಅರ್ಥಾನ್ ಭೋಗಾನಾಪ್ನೋತಿ ಪುಷ್ಕಲಾನ್ . ನ ಹಿ ಸರ್ವಪರಿತ್ಯಾಗಮಂತರೇಣ ಸುಖೀ ಭವೇತ್ .. ೧೮-೨.. ಮನುಷ್ಯನು ಅಖಿಲ ಧನ-ಸಂಪತ್ತುಗಳನ್ನು ಗಳಿಸಿದಾಗ ಪುಷ್ಕಳ ಭೋಗವನ್ನು ಅನುಭವಿಸುತ್ತಾನೆ. ಆದರೆ ಸರ್ವವನ್ನೂ ತ್ಯಾಗ ಮಾಡುವತನಕ ಅವನು ಸುಖಿಯಾಗುವದಿಲ್ಲ. (ಭರ್ತ್ರಹರಿಯ ಒಂದು ಶ್ಲೋಕ ಹೀಗೆ ಹೇಳುತ್ತದೆ " ಸುಖದಲ್ಲಿ ರೋಗದ ಭಯವಿದೆ; ಗೌರವಾನ್ವಿತ ಸಾಮಾಜಿಕ ಸ್ಥಾನದಲ್ಲಿ, ಅದನ್ನು ಕಳೆದುಕೊಳ್ಳುವ ಭಯವಿದೆ; ಸಂಪತ್ತಿನಲ್ಲಿ ರಾಜರ (ತೆರಿಗೆಯ) ಭಯವಿದೆ; ಗೌರವದಲ್ಲಿ ಅವಮಾನದ ಭಯವಿದೆ; ಅಧಿಕಾರದಲ್ಲಿ, ಶತ್ರುಗಳ ಭಯವಿದೆ; ಸೌಂದರ್ಯದಲ್ಲಿ ವೃದ್ಧಾಪ್ಯದ ಭಯವಿದೆ; ಪಾಂಡಿತ್ಯದಲ್ಲಿ, ವಿರೋಧಿಗಳ ಭಯವಿದೆ; ದೇಹದಲ್ಲಿ, ಮರಣದ ಭಯವಿದೆ. ಮನುಷ್ಯರಿಗೆ ಸಂಬಂಧಿಸಿದ ಎಲ್ಲಾ ಐಹಿಕ ವಿಷಯಗಳು ಭಯದಿಂದ ಕೂಡಿರುತ್ತವೆ; ಸರ್ವ ಪರಿತ್ಯಾಗ ಮಾತ್ರ ಎಲ್ಲಾ ಭಯವನ್ನು ನಾಶ ಮಾಡುತ್ತದೆ.") ಕರ್ತವ್ಯದುಃಖಮಾರ್ತಂಡಜ್ವಾಲಾದಗ್ಧಾಂತರಾತ್ಮನಃ . ಕುತಃ ಪ್ರಶಮಪೀಯೂಷಧಾರಾಸಾರಮೃತೇ ಸುಖಂ .. ೧೮-೩.. ಅಂತರಾತ್ಮನು ಕರ್ತವ್ಯ ಮತ್ತು ದುಃಖಗಳ ಸೂರ್ಯಸಮಾನ ಜ್ವಾ...