ಅಷ್ಟಾವಕ್ರಗೀತಾ - ೧೮
ಅಷ್ಟಾವಕ್ರ ಉವಾಚ ..
ಯಸ್ಯ ಬೋಧೋದಯೇ ತಾವತ್ಸ್ವಪ್ನವದ್ ಭವತಿ ಭ್ರಮಃ .
ತಸ್ಮೈ ಸುಖೈಕರೂಪಾಯ ನಮಃ ಶಾಂತಾಯ ತೇಜಸೇ .. ೧೮-೧..
ಯಾರಿಗೆ ಜ್ಞಾನೋದಯದಿಂದ ಮಾಯಾ-ಮೋಹಗಳು ಸ್ವಪ್ನದಂತಾಗುವವೋ (ಸ್ವಪ್ನದಂತೆ ಮಿಥ್ಯೆಯಾಗುವವೋ), ಅಂತಹ ಸುಖ ಏಕರೂಪಿ, ಶಾಂತರೂಪಿ ತೇಜಸ್ವಿಗೆ ನಮಸ್ಕಾರಗಳು.
ಅರ್ಜಯಿತ್ವಾಖಿಲಾನ್ ಅರ್ಥಾನ್ ಭೋಗಾನಾಪ್ನೋತಿ ಪುಷ್ಕಲಾನ್ .
ನ ಹಿ ಸರ್ವಪರಿತ್ಯಾಗಮಂತರೇಣ ಸುಖೀ ಭವೇತ್ .. ೧೮-೨..
ಮನುಷ್ಯನು ಅಖಿಲ ಧನ-ಸಂಪತ್ತುಗಳನ್ನು ಗಳಿಸಿದಾಗ ಪುಷ್ಕಳ ಭೋಗವನ್ನು ಅನುಭವಿಸುತ್ತಾನೆ. ಆದರೆ ಸರ್ವವನ್ನೂ ತ್ಯಾಗ ಮಾಡುವತನಕ ಅವನು ಸುಖಿಯಾಗುವದಿಲ್ಲ.
(ಭರ್ತ್ರಹರಿಯ ಒಂದು ಶ್ಲೋಕ ಹೀಗೆ ಹೇಳುತ್ತದೆ " ಸುಖದಲ್ಲಿ ರೋಗದ ಭಯವಿದೆ; ಗೌರವಾನ್ವಿತ ಸಾಮಾಜಿಕ ಸ್ಥಾನದಲ್ಲಿ, ಅದನ್ನು ಕಳೆದುಕೊಳ್ಳುವ ಭಯವಿದೆ; ಸಂಪತ್ತಿನಲ್ಲಿ ರಾಜರ (ತೆರಿಗೆಯ) ಭಯವಿದೆ; ಗೌರವದಲ್ಲಿ ಅವಮಾನದ ಭಯವಿದೆ; ಅಧಿಕಾರದಲ್ಲಿ, ಶತ್ರುಗಳ ಭಯವಿದೆ; ಸೌಂದರ್ಯದಲ್ಲಿ ವೃದ್ಧಾಪ್ಯದ ಭಯವಿದೆ; ಪಾಂಡಿತ್ಯದಲ್ಲಿ, ವಿರೋಧಿಗಳ ಭಯವಿದೆ; ದೇಹದಲ್ಲಿ, ಮರಣದ ಭಯವಿದೆ. ಮನುಷ್ಯರಿಗೆ ಸಂಬಂಧಿಸಿದ ಎಲ್ಲಾ ಐಹಿಕ ವಿಷಯಗಳು ಭಯದಿಂದ ಕೂಡಿರುತ್ತವೆ;
ಸರ್ವ ಪರಿತ್ಯಾಗ ಮಾತ್ರ ಎಲ್ಲಾ ಭಯವನ್ನು ನಾಶ ಮಾಡುತ್ತದೆ.")
ಕರ್ತವ್ಯದುಃಖಮಾರ್ತಂಡಜ್ವಾಲಾದಗ್ಧಾಂತರಾತ್ಮನಃ .
ಕುತಃ ಪ್ರಶಮಪೀಯೂಷಧಾರಾಸಾರಮೃತೇ ಸುಖಂ .. ೧೮-೩..
ಅಂತರಾತ್ಮನು ಕರ್ತವ್ಯ ಮತ್ತು ದುಃಖಗಳ ಸೂರ್ಯಸಮಾನ ಜ್ವಾಲೆಯಲ್ಲಿ ಸುಡುತ್ತಿರುವಾಗ, ಅದನ್ನು ಶಾಂತಗೊಳಿಸುವ ನೆಮ್ಮದಿಯ ಅಮೃತದ ಧಾರೆ ಇಲ್ಲದಿದ್ದರೆ, ಸುಖ ಎಲ್ಲಿಂದ ತಾನೇ ಸಿಕ್ಕೀತು?
ಭವೋಽಯಂ ಭಾವನಾಮಾತ್ರೋ ನ ಕಿಂಚಿತ್ ಪರಮಾರ್ಥತಃ .
ನಾಸ್ತ್ಯಭಾವಃ ಸ್ವಭಾವಾನಾಂ ಭಾವಾಭಾವವಿಭಾವಿನಾಂ .. ೧೮-೪..
ಈ ಜಗತ್ತು ಭಾವನೆ ಮಾತ್ರ - ಹೊರತಾಗಿ ಸತ್ಯವಲ್ಲ. ಇದರ ಯಾವುದು ಇರುವದು, ಯಾವುದು ಇಲ್ಲದಿರುವದು ಎಂಬ ಭೇದ ಅರಿತವನಿಗೆ ಅಸ್ತಿತ್ವ ರಾಹಿತ್ಯವಿಲ್ಲ.
ನ ದೂರಂ ನ ಚ ಸಂಕೋಚಾಲ್ಲಬ್ಧಮೇವಾತ್ಮನಃ ಪದಂ .
ನಿರ್ವಿಕಲ್ಪಂ ನಿರಾಯಾಸಂ ನಿರ್ವಿಕಾರಂ ನಿರಂಜನಂ .. ೧೮-೫..
ಆತ್ಮವು ನಿನ್ನಿಂದ ದೂರದಲ್ಲಿಲ್ಲ. ಅದು ಅಪಾರವಾದದ್ದು-ಮಿತಿಯಿಲ್ಲದಾಗಿದ್ದು ನಿರ್ವಿಕಲ್ಪ, ನಿರಾಯಾಸ, ನಿರ್ವಿಕಾರ, ನಿಷ್ಕಳಂಕವಾಗಿದೆ.
ವ್ಯಾಮೋಹಮಾತ್ರವಿರತೌ ಸ್ವರೂಪಾದಾನಮಾತ್ರತಃ .
ವೀತಶೋಕಾ ವಿರಾಜಂತೇ ನಿರಾವರಣದೃಷ್ಟಯಃ .. ೧೮-೬..
ವ್ಯಾಮೋಹವನ್ನು ತ್ಯಜಿಸಿ, ಸ್ವ-ರೂಪವನ್ನು ಗ್ರಹಿಸಿ ಅರಿತಾಗ, ಶೋಕ ದೂರವಾಗಿ ದೃಷ್ಟಿ ಸ್ವಷ್ಟವಾಗಿ ಮನುಜನು ವಿರಾಜಿಸುತ್ತಾನೆ.
ಸಮಸ್ತಂ ಕಲ್ಪನಾಮಾತ್ರಮಾತ್ಮಾ ಮುಕ್ತಃ ಸನಾತನಃ .
ಇತಿ ವಿಜ್ಞಾಯ ಧೀರೋ ಹಿ ಕಿಮಭ್ಯಸ್ಯತಿ ಬಾಲವತ್ .. ೧೮-೭..
ಸಮಸ್ತವೂ ಕಲ್ಪನಾ ಮಾತ್ರ. ತಾನು ಶಾಶ್ವತವಾಗಿ ಮುಕ್ತನು ಎಂಬ ಮಾತನ್ನು ತಿಳಿದ ಧೀರನು, ಯಾಕೆ ತಾನೆ ಬಾಲಕನಂತೆ ವರ್ತಿಸುತ್ತಾನೆ?
ಆತ್ಮಾ ಬ್ರಹ್ಮೇತಿ ನಿಶ್ಚಿತ್ಯ ಭಾವಾಭಾವೌ ಚ ಕಲ್ಪಿತೌ .
ನಿಷ್ಕಾಮಃ ಕಿಂ ವಿಜಾನಾತಿ ಕಿಂ ಬ್ರೂತೇ ಚ ಕರೋತಿ ಕಿಂ .. ೧೮-೮..
ಸ್ವಯಂ ತಾನೇ ಬ್ರಹ್ಮನೆಂದು ತಿಳಿದು, ಇರುವದು ಅಥವಾ ಇಲ್ಲದಿರುವದು ಎಲ್ಲಾ ಕಲ್ಪನೆಯಂದು ತಿಳಿದ ನಿಷ್ಕಾಮಿಯು, ಏನನ್ನು ತಿಳಿಯುತ್ತಾನೆ, ಏನನ್ನು ಹೇಳುತ್ತಾನೆ ಅಥವಾ ಏನನ್ನು ತಾನೆ ಮಾಡುತ್ತಾನೆ?
ಅಯಂ ಸೋಽಹಮಯಂ ನಾಹಮಿತಿ ಕ್ಷೀಣಾ ವಿಕಲ್ಪನಾ .
ಸರ್ವಮಾತ್ಮೇತಿ ನಿಶ್ಚಿತ್ಯ ತೂಷ್ಣೀಂಭೂತಸ್ಯ ಯೋಗಿನಃ .. ೧೮-೯..
ಸರ್ವವೂ ನಾನೇ ಎಂಬ ಸುನಿಶ್ಚಿತವಾಗಿ ನಂಬಿದ ಯೋಗಿಗೆ ಇದು ನಾನು, ಇದು ನಾನಲ್ಲ ಎಂಬ ಕಲ್ಪನೆ ಕ್ಷೀಣಿಸಿ ನಶಿಸುತ್ತದೆ.
ನ ವಿಕ್ಷೇಪೋ ನ ಚೈಕಾಗ್ರ್ಯಂ ನಾತಿಬೋಧೋ ನ ಮೂಢತಾ .
ನ ಸುಖಂ ನ ಚ ವಾ ದುಃಖಮುಪಶಾಂತಸ್ಯ ಯೋಗಿನಃ .. ೧೮-೧೦..
ಶಾಂತಿ ಹೊಂದಿದ ಯೋಗಿಗೆ ವಿಕ್ಷೇಪವೂ ಇಲ್ಲ, ಏಕಾಗ್ರತೆಯೂ ಇಲ್ಲ. ಅತಿಜ್ಞಾನವೂ ಇಲ್ಲ, ಮೂಢತನವೂ ಇಲ್ಲ. ಸುಖವೂ ಇಲ್ಲ, ದುಃಖವೂ ಇಲ್ಲ.
ಸ್ವಾರಾಜ್ಯೇ ಭೈಕ್ಷವೃತ್ತೌ ಚ ಲಾಭಾಲಾಭೇ ಜನೇ ವನೇ .
ನಿರ್ವಿಕಲ್ಪಸ್ವಭಾವಸ್ಯ ನ ವಿಶೇಷೋಽಸ್ತಿ ಯೋಗಿನಃ .. ೧೮-೧೧..
ನಿರ್ವಿಕಲ್ಪ ಸ್ವಭಾವದ ಯೋಗಿಗೆ ಅವನದೇ ಸಾಮ್ರಾಜ್ಯವಿರಲೀ ಅಥವಾ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಇರಲಿ, ಯಾವ ಭೇದವೂ ಇರುವದಿಲ್ಲ. ಲಾಭದಲ್ಲಿ, ಅಥವಾ ಹಾನಿಯಲ್ಲಿ, ಜನರ ಮಧ್ಯದಲ್ಲಿ ಅಥವಾ ಕಾಡನಲ್ಲಿ ಭೇದವಿರುವದಿಲ್ಲ.
ಕ್ವ ಧರ್ಮಃ ಕ್ವ ಚ ವಾ ಕಾಮಃ ಕ್ವ ಚಾರ್ಥಃ ಕ್ವ ವಿವೇಕಿತಾ .
ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಸ್ಯ ಯೋಗಿನಃ .. ೧೮-೧೨..
ದ್ವಂದ್ವದಿಂದ ಮುಕ್ತನಾದ ಯೋಗಿಗೆ ಧರ್ಮ ಎಲ್ಲಿಯದು, ಅರ್ಥ ಎಲ್ಲಿಯದು, ಕಾಮ ಎಲ್ಲಿಯದು ಹಾಗೂ ಭೇದ ಎಲ್ಲಿಯದು? ಅವನಿಗೆ ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬ ಭೇದವಿರುವದಿಲ್ಲ.
ಕೃತ್ಯಂ ಕಿಮಪಿ ನೈವಾಸ್ತಿ ನ ಕಾಪಿ ಹೃದಿ ರಂಜನಾ .
ಯಥಾ ಜೀವನಮೇವೇಹ ಜೀವನ್ಮುಕ್ತಸ್ಯ ಯೋಗಿನಃ .. ೧೮-೧೩..
ಯಾವುದೇ ಬಾಧ್ಯತೆ ಇಲ್ಲ, ಹೃದಯದಲ್ಲಿ ಯಾವ ಬಾಂಧವ್ಯವೂ ಇಲ್ಲ. ಅವನ ಕರ್ಮಗಳೆಲ್ಲ ಕೇವಲ ಜೀವನಕ್ಕೆ ಸಂಬಂಧಿಸಿವೆ.
ಕ್ವ ಮೋಹಃ ಕ್ವ ಚ ವಾ ವಿಶ್ವಂ ಕ್ವ ತದ್ ಧ್ಯಾನಂ ಕ್ವ ಮುಕ್ತತಾ .
ಸರ್ವಸಂಕಲ್ಪಸೀಮಾಯಾಂ ವಿಶ್ರಾಂತಸ್ಯ ಮಹಾತ್ಮನಃ .. ೧೮-೧೪..
ಎಲ್ಲ ಯೋಚನೆಗಳ ಸೀಮೆ ದಾಟಿ ವಿಶ್ರಾಂತಿಸಿತ್ತಿರುವ ಮಹಾತ್ಮನಿಗೆ ಮೋಹ ಎಲ್ಲಿ? ವಿಶ್ವ ಎಲ್ಲಿ? ಧ್ಯಾನ ಎಲ್ಲಿ? ಮೋಕ್ಷ ಎಲ್ಲಿ?
ಯೇನ ವಿಶ್ವಮಿದಂ ದೃಷ್ಟಂ ಸ ನಾಸ್ತೀತಿ ಕರೋತು ವೈ .
ನಿರ್ವಾಸನಃ ಕಿಂ ಕುರುತೇ ಪಶ್ಯನ್ನಪಿ ನ ಪಶ್ಯತಿ .. ೧೮-೧೫..
ಈ ವಿಶ್ವವನ್ನು ನೋಡಿ ಅರಿತವನು "ಅದು ಇಲ್ಲ" ಎಂದು ಹೇಳಿದರೆ ನಿರ್ಮೋಹಿ ಏನು ತಾನೆ ಮಾಡಿಯಾನು? ಅವನು ಎಲ್ಲ ನೋಡಿದರೂ ಏನನ್ನೂ ನೋಡುವದಿಲ್ಲ.
ಯೇನ ದೃಷ್ಟಂ ಪರಂ ಬ್ರಹ್ಮ ಸೋಽಹಂ ಬ್ರಹ್ಮೇತಿ ಚಿಂತಯೇತ್ .
ಕಿಂ ಚಿಂತಯತಿ ನಿಶ್ಚಿಂತೋ ದ್ವಿತೀಯಂ ಯೋ ನ ಪಶ್ಯತಿ .. ೧೮-೧೬..
ಯಾರು ಬ್ರಹ್ಮಸಾಕ್ಷಾತ್ಕಾರ ಹೊಂದಿದ್ದಾನೋ ಅವನು ತಾನೇ ಬ್ರಹ್ಮನೆಂದು ಯೋಚಿಸುತ್ತಾನೆ. ಆದರೆ ದ್ವೈತವನ್ನು ನೋಡದವನು (ಆತ್ಮ ಪರಮಾತ್ಮರಲ್ಲಿ ಭೇದ ನೋಡದವನು), ನಿಶ್ಚಿಂತನು ಏನು ತಾನೇ ಯೋಚಿಸುತ್ತಾನೆ?
ದೃಷ್ಟೋ ಯೇನಾತ್ಮವಿಕ್ಷೇಪೋ ನಿರೋಧಂ ಕುರುತೇ ತ್ವಸೌ .
ಉದಾರಸ್ತು ನ ವಿಕ್ಷಿಪ್ತಃ ಸಾಧ್ಯಾಭಾವಾತ್ಕರೋತಿ ಕಿಂ .. ೧೮-೧೭..
ತನ್ನ ಆತ್ಮದ ವ್ಯಾಕುಲತೆಯನ್ನು ನೋಡಿದವನು ಅದರ ನಿರೋಧ ಮಾಡುತ್ತಾನೆ. ಆದರೆ ಉದಾತ್ತನು ಯಾವ ಚಿತ್ತ ವಿಕ್ಷೇಪವಿಲ್ಲದಿರುವದರಿಂದ ಏನನ್ನೂ ಮಾಡುವದಿಲ್ಲ.
ಧೀರೋ ಲೋಕವಿಪರ್ಯಸ್ತೋ ವರ್ತಮಾನೋಽಪಿ ಲೋಕವತ್ .
ನ ಸಮಾಧಿಂ ನ ವಿಕ್ಷೇಪಂ ನ ಲೋಪಂ ಸ್ವಸ್ಯ ಪಶ್ಯತಿ .. ೧೮-೧೮..
ಧೀರನು ಲೋಕದ ಜನರಂತೆ ಇದ್ದರೂ, ಅವರಿಗಿಂತ ವಿಪರೀತನಾಗಿರುತ್ತಾನೆ. ಅವನು ತನ್ನಲ್ಲಿ ಸಮಾಧಿಯನ್ನಾಗಲೀ, ವಿಕ್ಷೇಪವನ್ನಾಗಲೀ, ಲೋಪವನ್ನಾಗಲೀ ಕಾಣುವದಿಲ್ಲ.
ಭಾವಾಭಾವವಿಹೀನೋ ಯಸ್ತೃಪ್ತೋ ನಿರ್ವಾಸನೋ ಬುಧಃ .
ನೈವ ಕಿಂಚಿತ್ಕೃತಂ ತೇನ ಲೋಕದೃಷ್ಟ್ಯಾ ವಿಕುರ್ವತಾ .. ೧೮-೧೯..
ವಿವೇಕಿಯು ಇರುವಿಕೆ, ಇಲ್ಲದಿರುವಿಕೆಗಳಿಂದ ಮುಕ್ತನಾಗಿರುತ್ತಾನೆ, ಹಾಗೂ ತೃಪ್ತನೂ, ವಾಸನಾರಹಿತನೂ ಆಗಿರುತ್ತಾನೆ. ಕರ್ಮ ಮಾಡುವಂತೆ ಜಗತ್ತಿಗೆ ಕಂಡರೂ ಅವನು ನಿಷ್ಕ್ರಿಯನಾಗಿರುತ್ತಾನೆ. (ಅವನು ಯಾವುದೇ ಅಹಂಭಾವವಿಲ್ಲದೇ ಕರ್ಮ ಮಾಡುವದರಿಂದ, ಆ ಕರ್ಮಗಳ ಜೊತೆ ಅವನು ತನ್ನನ್ನು ಗುರುತಿಸಿಕೊಳ್ಳುವದಿಲ್ಲ)
ಪ್ರವೃತ್ತೌ ವಾ ನಿವೃತ್ತೌ ವಾ ನೈವ ಧೀರಸ್ಯ ದುರ್ಗ್ರಹಃ .
ಯದಾ ಯತ್ಕರ್ತುಮಾಯಾತಿ ತತ್ಕೃತ್ವಾ ತಿಷ್ಠತಃ ಸುಖಂ .. ೧೮-೨೦..
ಧೀರನಿಗೆ ಯಾವ ಕರ್ಮಗಳು ಬರುವವೋ ಅವುಗಳನ್ನು ಮಾಡುತ್ತ ಸುಖದಲ್ಲಿರುತ್ತಾನೆ - ಅವನನ್ನು ಕಾರ್ಯಪ್ರವೃತ್ತಿ, ಅಥವಾ ನಿಷ್ಕ್ರಿಯತೆ ಪೀಡಿಸುವದಿಲ್ಲ.
ನಿರ್ವಾಸನೋ ನಿರಾಲಂಬಃ ಸ್ವಚ್ಛಂದೋ ಮುಕ್ತಬಂಧನಃ .
ಕ್ಷಿಪ್ತಃ ಸಂಸ್ಕಾರವಾತೇನ ಚೇಷ್ಟತೇ ಶುಷ್ಕಪರ್ಣವತ್ .. ೧೮-೨೧..
ಅವನು ವಾಸನಾರಹಿತನಾಗಿ, ನಿರಾಲಂಬನಾಗಿ, ಸ್ವಚ್ಛಂದನಾಗಿ, ಬಂಧಮುಕ್ತನಾಗಿ, ಸಂಸ್ಕಾರದ ಪ್ರಭಾವದಿಂದ ಒಣ ಎಲೆಯಂತೆ ಹೊರಳುತ್ತ ಚಲಿಸುತ್ತಾನೆ.
ಅಸಂಸಾರಸ್ಯ ತು ಕ್ವಾಪಿ ನ ಹರ್ಷೋ ನ ವಿಷಾದತಾ .
ಸ ಶೀತಲಮನಾ ನಿತ್ಯಂ ವಿದೇಹ ಇವ ರಾಜಯೇ .. ೧೮-೨೨..
ಸಂಸಾರಸಾಗರ ದಾಟಿದವನಿಗೆ ಹರ್ಷವೂ ಇಲ್ಲ, ವಿಷಾದವೂ ಇಲ್ಲ. ಅವನು ಶೀತಲ ಮನದಿಂದ ಸದಾ ದೇಹವೇ ಇಲ್ಲದಿರುವನಂತೆ ರಾಜಿಸುತ್ತಾನೆ.
ಕುತ್ರಾಪಿ ನ ಜಿಹಾಸಾಸ್ತಿ ನಾಶೋ ವಾಪಿ ನ ಕುತ್ರಚಿತ್ .
ಆತ್ಮಾರಾಮಸ್ಯ ಧೀರಸ್ಯ ಶೀತಲಾಚ್ಛತರಾತ್ಮನಃ .. ೧೮-೨೩..
ಯಾವ ಜ್ಞಾನಿಯು ತನ್ನಲ್ಲಿ ಆನಂದವನ್ನು ಹೊಂದಿದ್ದಾನೆ ಮತ್ತು ಯಾರ ಮನಸ್ಸು ಶಾಂತ ಮತ್ತು ಶುದ್ಧವಾಗಿದೆಯೋ, ಅವನು ಯಾವುದನ್ನೂ ತ್ಯಜಿಸುವ ಬಯಕೆಯನ್ನು ಹೊಂದಿರುವುದಿಲ್ಲ ಅಥವಾ ಯಾವ ನಾಶವನ್ನು ಅನುಭವಿಸುವುದಿಲ್ಲ.
ಪ್ರಕೃತ್ಯಾ ಶೂನ್ಯಚಿತ್ತಸ್ಯ ಕುರ್ವತೋಽಸ್ಯ ಯದೃಚ್ಛಯಾ .
ಪ್ರಾಕೃತಸ್ಯೇವ ಧೀರಸ್ಯ ನ ಮಾನೋ ನಾವಮಾನತಾ .. ೧೮-೨೪..
ಯಾರು ಸಹಜವಾಗೇ ಶೂನ್ಯಚಿತ್ತನೋ, ಯಾರು ಸ್ವ ಇಚ್ಛೆಯಂತೆ ಕಾರ್ಯ ಮಾಡುತ್ತಾನೋ, ಆ ಧೀರನಿಗೆ ಸಾಮಾನ್ಯ ಜನರಂತೆ ಮಾನ-ಅವಮಾನಗಳಿಂದ ಪ್ರಭಾವಿತನಾಗುವದಿಲ್ಲ.
ಕೃತಂ ದೇಹೇನ ಕರ್ಮೇದಂ ನ ಮಯಾ ಶುದ್ಧರೂಪಿಣಾ .
ಇತಿ ಚಿಂತಾನುರೋಧೀ ಯಃ ಕುರ್ವನ್ನಪಿ ಕರೋತಿ ನ .. ೧೮-೨೫..
"ಕ್ರಿಯೆ ದೇಹದಿಂದ ಮಾಡಲ್ಪಟ್ಟದ್ದು. ಶುದ್ಧರೂಪಿಯಾದ ನನ್ನಿಂದಲ್ಲ" ಎಂದು ತಿಳಿದುಕೊಂಡವನು ಕಾರ್ಯ ಮಾಡಿದರೂ ಕಾರ್ಯ ಮಾಡುವದಿಲ್ಲ.
ಅತದ್ವಾದೀವ ಕುರುತೇ ನ ಭವೇದಪಿ ಬಾಲಿಶಃ .
ಜೀವನ್ಮುಕ್ತಃ ಸುಖೀ ಶ್ರೀಮಾನ್ ಸಂಸರನ್ನಪಿ ಶೋಭತೇ .. ೧೮-೨೬..
ಜೀವನ್ಮಕ್ತನು ಕರ್ಮ ಮಾಡುತ್ತಿರುವಂತೆ ತೋರಿ ಬಂದರೂ ಬಾಲಿಶನಲ್ಲ. ಸುಖಿಯಾದ, ಮಹಿಮಾನ್ವಿತನಾದ ಅವನು ಸಂಸಾರದ ಮಧ್ಯದಲ್ಲೂ ಶೋಭಿಸುತ್ತಾನೆ.
ನಾನಾವಿಚಾರಸುಶ್ರಾಂತೋ ಧೀರೋ ವಿಶ್ರಾಂತಿಮಾಗತಃ .
ನ ಕಲ್ಪತೇ ನ ಜಾನಾತಿ ನ ಶೃಣೋತಿ ನ ಪಶ್ಯತಿ .. ೧೮-೨೭..
ವಿವಿಧ ಆಲೋಚನೆಗಳಿಂದ ದಣಿದು, ವಿಶ್ರಾಂತಿಯನ್ನು ಪಡೆದವನಾದ ಬುದ್ಧಿವಂತನು , ಏನನ್ನೂ ಊಹಿಸುವುದಿಲ್ಲ, ತಿಳಿಯುವುದಿಲ್ಲ, ಕೇಳುವುದಿಲ್ಲ ಅಥವಾ ನೋಡುವುದಿಲ್ಲ. (ಎಲ್ಲ ರೀತಿಯ ಅಂತಃ ಹಾಗೂ ಬಹಿರ್ ಕ್ರಿಯೆಗಳನ್ನು ತ್ಯಜಿಸಿ, ಆತ್ಮದಲ್ಲಿ ಪರಮಾನಂದವನ್ನು ಹೊಂದುತ್ತಾನೆ)
ಅಸಮಾಧೇರವಿಕ್ಷೇಪಾನ್ ನ ಮುಮುಕ್ಷುರ್ನ ಚೇತರಃ .
ನಿಶ್ಚಿತ್ಯ ಕಲ್ಪಿತಂ ಪಶ್ಯನ್ ಬ್ರಹ್ಮೈವಾಸ್ತೇ ಮಹಾಶಯಃ .. ೧೮-೨೮..
ಸಮಾಧಿ ಅಥವಾ ವಿಕ್ಷೇಪಗಳಿಂದ ಅತೀತನಾಗಿ ಮುಕ್ತಿಯನ್ನಾಗಲೀ, ಅಥವಾ ಜೀವನವನ್ನಾಗಲೀ ಆಶಿಸದೇ, ಈ ಜಗತ್ತು ಕಲ್ಪಿತ ಎಂದು ನಿಶ್ಚಯವಾಗಿ ಅರಿತು, ಬ್ರಹ್ಮನಲ್ಲಿ ಸ್ಥಿತನಾಗಿರುತ್ತಾನೆ.
ಯಸ್ಯಾಂತಃ ಸ್ಯಾದಹಂಕಾರೋ ನ ಕರೋತಿ ಕರೋತಿ ಸಃ .
ನಿರಹಂಕಾರಧೀರೇಣ ನ ಕಿಂಚಿದಕೃತಂ ಕೃತಂ .. ೧೮-೨೯..
ಯಾರಲ್ಲಿ ಅಹಂಕಾರ ಅಡಗಿದೆಯೋ, ಅವನು ಏನನ್ನು ಮಾಡದಿದ್ದರೂ ಕಾರ್ಯ ಮಾಡುತ್ತಾನೆ. ನಿರಹಂಕಾರಿ ಧೀರನಿಂದ ಕರ್ಮಗಳು ಮಾಡಿದಂತೆ ಕಂಡುಬಂದರೂ ಅವನೇನನ್ನೂ ಮಾಡಿರುವದಿಲ್ಲ.
ನೋದ್ವಿಗ್ನಂ ನ ಚ ಸಂತುಷ್ಟಮಕರ್ತೃ ಸ್ಪಂದವರ್ಜಿತಂ .
ನಿರಾಶಂ ಗತಸಂದೇಹಂ ಚಿತ್ತಂ ಮುಕ್ತಸ್ಯ ರಾಜತೇ .. ೧೮-೩೦..
ಮುಕ್ತನಾದವನು ಮನಸ್ಸು ಉದ್ವಿಗ್ನವಾಗುವುದಿಲ್ಲ ಅಥವಾ ಸಂತುಷ್ಟವಾಗುವದಿಲ್ಲ, ಅದು ಕ್ರಿಯೆ ಮತ್ತು ಚಲನೆಯಿಂದ ದೂರವಿರುತ್ತದೆ, ಭರವಸೆ ಮತ್ತು ಅನುಮಾನದಿಂದ ಮುಕ್ತವಾಗಿರುತ್ತದೆ ಮತ್ತು ಅದು ತನ್ನದೇ ಆದ ವೈಭವದಲ್ಲಿ ಪ್ರಕಾಶಿಸುತ್ತದೆ.
ನಿರ್ಧ್ಯಾತುಂ ಚೇಷ್ಟಿತುಂ ವಾಪಿ ಯಚ್ಚಿತ್ತಂ ನ ಪ್ರವರ್ತತೇ .
ನಿರ್ನಿಮಿತ್ತಮಿದಂ ಕಿಂತು ನಿರ್ಧ್ಯಾಯೇತಿ ವಿಚೇಷ್ಟತೇ .. ೧೮-೩೧..
ಮುಕ್ತನಾದವನ ಮನಸ್ಸು ಧ್ಯಾನಶೀಲ ಅಥವಾ ಕ್ರಿಯಾಶೀಲವಾಗಿರಲು ಶ್ರಮಿಸುವುದಿಲ್ಲ; ಆದರೆ ಅದು ಯಾವುದೇ ಉದ್ದೇಶವಿಲ್ಲದೆ ಧ್ಯಾನಸ್ಥ ಮತ್ತು ಕ್ರಿಯಾಶೀಲವಾಗುತ್ತದೆ.
ತತ್ತ್ವಂ ಯಥಾರ್ಥಮಾಕರ್ಣ್ಯ ಮಂದಃ ಪ್ರಾಪ್ನೋತಿ ಮೂಢತಾಂ .
ಅಥವಾ ಯಾತಿ ಸಂಕೋಚಮಮೂಢಃ ಕೋಽಪಿ ಮೂಢವತ್ .. ೧೮-೩೨..
ತತ್ವವನ್ನು ಯತಾರ್ಥವಾಗಿ ಕೇಳಿ ಮಂದಬುದ್ಧಿಯು ಗೊಂದಲಗೊಳ್ಳುತ್ತಾನೆ. ಅದೇ ಜಾಣನು ತತ್ವವನ್ನು ಕೇಳಿ ತನ್ನಲ್ಲೇ ಕುಗ್ಗಿ ಮೂಢನಂತೆ ನಿಷ್ಕ್ರಿಯನಾಗುತ್ತಾನೆ.
ಏಕಾಗ್ರತಾ ನಿರೋಧೋ ವಾ ಮೂಢೈರಭ್ಯಸ್ಯತೇ ಭೃಶಂ .
ಧೀರಾಃ ಕೃತ್ಯಂ ನ ಪಶ್ಯಂತಿ ಸುಪ್ತವತ್ಸ್ವಪದೇ ಸ್ಥಿತಾಃ .. ೧೮-೩೩..
ಅಜ್ಞಾನಿಗಳು ಏಕಾಗ್ರತೆ ಮತ್ತು ಮನಸ್ಸಿನ ನಿಯಂತ್ರಣದ ಅಭ್ಯಾಸವನ್ನು ನಿರಂತರವಾಗಿ ಮಾಡುತ್ತಾರೆ. ಬುದ್ಧಿವಂತರು ತಮ್ಮ ನೈಜ ಆತ್ಮದಲ್ಲಿ ನೆಲೆಸಿ, ನಿದ್ರೆಯಲ್ಲಿರುವ ವ್ಯಕ್ತಿಗಳಂತೆ, ಏನನ್ನೂ ಮಾಡುವದಿಲ್ಲ.
ಅಪ್ರಯತ್ನಾತ್ ಪ್ರಯತ್ನಾದ್ ವಾ ಮೂಢೋ ನಾಪ್ನೋತಿ ನಿರ್ವೃತಿಂ .
ತತ್ತ್ವನಿಶ್ಚಯಮಾತ್ರೇಣ ಪ್ರಾಜ್ಞೋ ಭವತಿ ನಿರ್ವೃತಃ .. ೧೮-೩೪..
ಪ್ರಯತ್ನಿಸಿ ಅಥವಾ ಪ್ರಯತ್ನ ಮಾಡದೇ, ಮೂಢನು ಮುಕ್ತಿಯನ್ನು ಸಂತೋಷ ಹೊಂದುವದಿಲ್ಲ. ಕೇವಲ ಸತ್ಯದ ಖಚಿತತೆಯೊಂದರ ಮೂಲಕ ಪ್ರಾಜ್ಞನು ಆನಂದವನ್ನು ಪಡೆಯುತ್ತಾನೆ.
ಶುದ್ಧಂ ಬುದ್ಧಂ ಪ್ರಿಯಂ ಪೂರ್ಣಂ ನಿಷ್ಪ್ರಪಂಚಂ ನಿರಾಮಯಂ .
ಆತ್ಮಾನಂ ತಂ ನ ಜಾನಂತಿ ತತ್ರಾಭ್ಯಾಸಪರಾ ಜನಾಃ .. ೧೮-೩೫..
ಆಚರಣೆಯಲ್ಲಿ ನಿರತರಾದ ಜನರು ಶುದ್ಧ, ಬುದ್ಧಿವಂತ, ಪ್ರಿಯ, ಪೂರ್ಣ, ಪ್ರಪಂಚಕ್ಕೆ ಅತೀತವಾದ, ನಿಷ್ಕಳಂಕ ಆತ್ಮನನ್ನು ಅರಿತುಕೊಳ್ಳುವದಿಲ್ಲ.
ನಾಪ್ನೋತಿ ಕರ್ಮಣಾ ಮೋಕ್ಷಂ ವಿಮೂಢೋಽಭ್ಯಾಸರೂಪಿಣಾ .
ಧನ್ಯೋ ವಿಜ್ಞಾನಮಾತ್ರೇಣ ಮುಕ್ತಸ್ತಿಷ್ಠತ್ಯವಿಕ್ರಿಯಃ .. ೧೮-೩೬..
ಮೂಢನು ಅಭ್ಯಾಸ ರೂಪದ ಕರ್ಮದಿಂದ ಮೋಕ್ಷವನ್ನು ಪಡೆಯುವದಿಲ್ಲ. ಧನ್ಯನಾದವನು ಜ್ಞಾನಮಾತ್ರದಿಂದ ಮುಕ್ತನಾಗಿ, ನಿಶ್ಚಲನಾಗಿ ನಿಂತಿರುತ್ತಾನೆ. (ಮುಕ್ತಿ ಪಡೆದ ನಂತರ ಯಾವುದೇ ಭೌತಿಕ ಅಥವಾ ಮಾನಸಿಕ ಕರ್ಮಗಳ ಅವಶ್ಯಕತೆಯೇ ಇಲ್ಲದಿರುವದರಿಂದ ಅವನು ನಿಶ್ಚಲನಾಗಿ, ನಿಷ್ಕ್ರಿಯನಾಗಿ ನಿಂತಿರುತ್ತಾನೆ)
ಮೂಢೋ ನಾಪ್ನೋತಿ ತದ್ ಬ್ರಹ್ಮ ಯತೋ ಭವಿತುಮಿಚ್ಛತಿ .
ಅನಿಚ್ಛನ್ನಪಿ ಧೀರೋ ಹಿ ಪರಬ್ರಹ್ಮಸ್ವರೂಪಭಾಕ್ .. ೧೮-೩೭..
ಅಜ್ಞಾನಿಯು ಬ್ರಹ್ಮವನ್ನು ಪಡೆಯುವುದಿಲ್ಲ ಏಕೆಂದರೆ ಅವನು ಬ್ರಹ್ಮನಾಗಲು ಬಯಸುತ್ತಾನೆ. ಜ್ಞಾನಿಯು ಪರಮ ಬ್ರಹ್ಮನ ಸ್ವರೂಪವನ್ನು ಅಪೇಕ್ಷಿಸದೇ ಇದ್ದರೂ ಖಂಡಿತವಾಗಿ ಅರಿತುಕೊಳ್ಳುತ್ತಾನೆ.
ನಿರಾಧಾರಾ ಗ್ರಹವ್ಯಗ್ರಾ ಮೂಢಾಃ ಸಂಸಾರಪೋಷಕಾಃ .
ಏತಸ್ಯಾನರ್ಥಮೂಲಸ್ಯ ಮೂಲಚ್ಛೇದಃ ಕೃತೋ ಬುಧೈಃ .. ೧೮-೩೮.
ಯಾವುದೇ ಬೆಂಬಲವಿಲ್ಲದೆ ಮತ್ತು ಸಾಧನೆಗಾಗಿ ಉತ್ಸುಕರಾಗಿ, ಅಜ್ಞಾನಿಗಳು ಸಂಸಾರಚಕ್ರವನ್ನು ಪೋಷಿಸುತ್ತಾರೆ. ಬುದ್ಧಿವಂತರು ಎಲ್ಲಾ ದುಃಖಗಳ ಮೂಲವಾದ ಈ ಪ್ರಪಂಚದ ಮೂಲವನ್ನೇ ಕತ್ತರಿಸುತ್ತಾರೆ.
ನ ಶಾಂತಿಂ ಲಭತೇ ಮೂಢೋ ಯತಃ ಶಮಿತುಮಿಚ್ಛತಿ .
ಧೀರಸ್ತತ್ತ್ವಂ ವಿನಿಶ್ಚಿತ್ಯ ಸರ್ವದಾ ಶಾಂತಮಾನಸಃ .. ೧೮-೩೯..
ಮೂಢನು ಶಾಂತಿಯನ್ನು ಪಡೆಯುವುದಿಲ್ಲ, ಏಕೆಂದರೆ ಅವನು ತನ್ನ ಮನಸ್ಸನ್ನು ಶಾಂತಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಜ್ಞಾನಿಯು ಸತ್ಯವನ್ನು ಅರಿತು ಮನಸ್ಸಿನಲ್ಲಿ ಸದಾ ಶಾಂತನಾಗಿರುತ್ತಾನೆ.
ಕ್ವಾತ್ಮನೋ ದರ್ಶನಂ ತಸ್ಯ ಯದ್ ದೃಷ್ಟಮವಲಂಬತೇ .
ಧೀರಾಸ್ತಂ ತಂ ನ ಪಶ್ಯಂತಿ ಪಶ್ಯಂತ್ಯಾತ್ಮಾನಮವ್ಯಯಂ .. ೧೮-೪೦..
ದೃಶ್ಯ ಪ್ರಪಂಚವನ್ನೇ ಅವಲಂಬಿಸಿಕೊಂಡಿರುವವನಿಗೆ ಆತ್ಮ ದರ್ಶನವೆಲ್ಲಿ ದೊರೆಯುತ್ತದೆ? ಜ್ಞಾನಿಗಳೋ ದೃಶ್ಯ ಪ್ರಪಂಚವನ್ನು ನೋಡುದೇ, ಬದಲಿಗೆ ಅವ್ಯಯ ಆತ್ಮವನ್ನು ನೋಡುತ್ತಾರೆ.
ಕ್ವ ನಿರೋಧೋ ವಿಮೂಢಸ್ಯ ಯೋ ನಿರ್ಬಂಧಂ ಕರೋತಿ ವೈ .
ಸ್ವಾರಾಮಸ್ಯೈವ ಧೀರಸ್ಯ ಸರ್ವದಾಸಾವಕೃತ್ರಿಮಃ .. ೧೮-೪೧..
ಮನಸ್ಸಿನ ನಿಯಂತ್ರಣ ಮಾಡಲು ಶ್ರಮಿಸುವ ಮೂಡನಿಗೆ ನಿಯಂತ್ರಣ ಎಲ್ಲಿದೆ? ಆದರೆ ಬುದ್ಧಿವಂತನು, ಯಾವಾಗಲೂ ಆತ್ಮತೃಪ್ತನಾಗಿ, ಯಾವುದೇ ಕೃತಕತೆ ಇಲ್ಲದೆ ಉಳಿಯುತ್ತಾನೆ.
ಭಾವಸ್ಯ ಭಾವಕಃ ಕಶ್ಚಿನ್ ನ ಕಿಂಚಿದ್ ಭಾವಕೋಪರಃ .
ಉಭಯಾಭಾವಕಃ ಕಶ್ಚಿದ್ ಏವಮೇವ ನಿರಾಕುಲಃ .. ೧೮-೪೨..
ಕೆಲವರು ಅಸ್ತಿತ್ವ ಇದೆ ಎಂದು ಭಾವಿಸುತ್ತಾರೆ, ಕೆಲವರು ಏನೂ ಇಲ್ಲ ಎಂದು ಭಾವಿಸುತ್ತಾರೆ. ಎರಡನ್ನೂ ಯೋಚಿಸದೇ, ಅದರಿಂದ ವ್ಯಾಕುಲತೆಯಿಂದ ಮುಕ್ತರಾಗಿ ಇರುವವರು ಅಪರೂಪ.
ಶುದ್ಧಮದ್ವಯಮಾತ್ಮಾನಂ ಭಾವಯಂತಿ ಕುಬುದ್ಧಯಃ .
ನ ತು ಜಾನಂತಿ ಸಂಮೋಹಾದ್ಯಾವಜ್ಜೀವಮನಿರ್ವೃತಾಃ .. ೧೮-೪೩..
ಭ್ರಮೆಯುಳ್ಳವರು ಮೂರ್ಖತನದಿಂದ ಶುದ್ಧವಾದ, ದ್ವಂದ್ವವಿಲ್ಲದ ಆತ್ಮವನ್ನು ಧ್ಯಾನಿಸುತ್ತಾರೆ. ಆದರೆ ಅವರ ಭ್ರಮೆಗಳಿಂದಾಗಿ ಅದನ್ನು ಅರಿತುಕೊಳ್ಳದೇ, ಜೀವನದುದ್ದಕ್ಕೂ ಅತೃಪ್ತರಾಗಿರುತ್ತಾರೆ.
ಮುಮುಕ್ಷೋರ್ಬುದ್ಧಿರಾಲಂಬಮಂತರೇಣ ನ ವಿದ್ಯತೇ .
ನಿರಾಲಂಬೈವ ನಿಷ್ಕಾಮಾ ಬುದ್ಧಿರ್ಮುಕ್ತಸ್ಯ ಸರ್ವದಾ .. ೧೮-೪೪..
ಮುಕ್ತಿಗಾಗಿ ಹಂಬಲಿಸುವವನ ಬುದ್ಧಿ ಸ್ವತಂತ್ರವಲ್ಲ; (ಆದರೆ) ವಿಮೋಚನೆಗೊಂಡ ವ್ಯಕ್ತಿಯ ಬುದ್ಧಿಯು ನಿಜವಾಗಿಯೂ ಸದಾ ಸ್ವಾವಲಂಬಿಯಾಗಿದೆ ಮತ್ತು ಆಸೆಯಿಂದ ಮುಕ್ತವಾಗಿದೆ.
ವಿಷಯದ್ವೀಪಿನೋ ವೀಕ್ಷ್ಯ ಚಕಿತಾಃ ಶರಣಾರ್ಥಿನಃ .
ವಿಶಂತಿ ಝಟಿತಿ ಕ್ರೋಡಂ ನಿರೋಧೈಕಾಗ್ರಸಿದ್ಧಯೇ .. ೧೮-೪೫..
ಇಂದ್ರಿಯ-ವಸ್ತುಗಳ ಹುಲಿಗಳನ್ನು ನೋಡಿ ಭಯಭೀತರಾದವರು ಆಶ್ರಯವನ್ನು ಬಯಸುತ್ತಾರೆ, ನಿಯಂತ್ರಣ ಮತ್ತು ಏಕಾಗ್ರತೆಯನ್ನು ಸಾಧಿಸಲು ಮಡಿಲನ್ನು ಪ್ರವೇಶಿಸುತ್ತಾರೆ.
ನಿರ್ವಾಸನಂ ಹರಿಂ ದೃಷ್ಟ್ವಾ ತೂಷ್ಣೀಂ ವಿಷಯದಂತಿನಃ .
ಪಲಾಯಂತೇ ನ ಶಕ್ತಾಸ್ತೇ ಸೇವಂತೇ ಕೃತಚಾಟವಃ .. ೧೮-೪೬..
ಅಪೇಕ್ಷೆಯಿಲ್ಲದೆ ಸಿಂಹದಂತಿರುವ ಮನುಷ್ಯನನ್ನು ನೋಡಿ, ಇಂದ್ರಿಯಗಳೆಂಬ ಆನೆಗಳು ಶಾಂತವಾಗಿ, ಪಲಾಯನ ಮಾಡುತ್ತವೆ ಮತ್ತು ಸಾಧ್ಯವಾಗದಿದ್ದಾಗ, ಹೊಗಳುಭಟರಂತೆ ಅವನ ಸೇವೆ ಮಾಡುತ್ತವೆ.
ನ ಮುಕ್ತಿಕಾರಿಕಾಂ ಧತ್ತೇ ನಿಃಶಂಕೋ ಯುಕ್ತಮಾನಸಃ .
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನಶ್ನನ್ನಾಸ್ತೇ ಯಥಾಸುಖಂ .. ೧೮-೪೭..
ಸಂದೇಹಗಳಿಂದ ಮುಕ್ತನಾದ ಮತ್ತು ತನ್ನ ಮನಸ್ಸನ್ನು ಆತ್ಮದಲ್ಲಿ ನೆಲೆಸಿಕೊಂಡಿರುವವನು ಮುಕ್ತಿಯ ಮಾರ್ಗವನ್ನು ಅಳವಡಿಸಿಕೊಳ್ಳುವದಿಲ್ಲ. ನೋಡುತ್ತಾ, ಕೇಳುತ್ತಾ, ಸ್ಪರ್ಶಿಸುತ್ತಾ, ವಾಸನೆ ನೋಡುತ್ತಾ, ತಿನ್ನುತ್ತಾ ನೆಮ್ಮದಿಯಿಂದ ಬದುಕುತ್ತಾನೆ.
ವಸ್ತುಶ್ರವಣಮಾತ್ರೇಣ ಶುದ್ಧಬುದ್ಧಿರ್ನಿರಾಕುಲಃ .
ನೈವಾಚಾರಮನಾಚಾರಮೌದಾಸ್ಯಂ ವಾ ಪ್ರಪಶ್ಯತಿ .. ೧೮-೪೮..
ಮೂಲ ಸತ್ಯದ ಬಗ್ಗೆ ಕೇಳಿದ ಮಾತ್ರದಿಂದ ಯಾರ ಮನಸ್ಸು ಶುದ್ಧವಾಗಿ, ವ್ಯಾಕುಲತೆಯಿಂದ ಮುಕ್ತವಾಗುತ್ತದೆಯೋ, ಅವರು ಒಳ್ಳೆಯ ನಡತೆ ಅಥವಾ ಕೆಟ್ಟ ನಡತೆ ಅಥವಾ ಉದಾಸೀನತೆಯನ್ನು ಕಾಣುವುದಿಲ್ಲ.
ಯದಾ ಯತ್ಕರ್ತುಮಾಯಾತಿ ತದಾ ತತ್ಕುರುತೇ ಋಜುಃ .
ಶುಭಂ ವಾಪ್ಯಶುಭಂ ವಾಪಿ ತಸ್ಯ ಚೇಷ್ಟಾ ಹಿ ಬಾಲವತ್ .. ೧೮-೪೯..
ಸರಳ, ನೇರವಾದ, ಪ್ರಾಮಾಣಿಕ ವ್ಯಕ್ತಿಯು ಯಾವುದೇ ಕಾರ್ಯ ಉದ್ಭವಿಸಿದಾಗ, ಅದು ಒಳ್ಳೆಯದು ಅಥವಾ ಕೆಟ್ಟದ್ದಾಗಿರಲಿ, ಅದನ್ನು ಮಗುವಿನಂತಹ ಸ್ವಾಭಾವಿಕತೆಯಿಂದ ಮಾಡುತ್ತಾನೆ.
ಸ್ವಾತಂತ್ರ್ಯಾತ್ಸುಖಮಾಪ್ನೋತಿ ಸ್ವಾತಂತ್ರ್ಯಾಲ್ಲಭತೇ ಪರಂ .
ಸ್ವಾತಂತ್ರ್ಯಾನ್ನಿರ್ವೃತಿಂ ಗಚ್ಛೇತ್ಸ್ವಾತಂತ್ರ್ಯಾತ್ ಪರಮಂ ಪದಂ .. ೧೮-೫೦..
ಸ್ವಾತಂತ್ರ್ಯದಿಂದ ಸಂತೋಷ ಸಿಗುತ್ತದೆ, ಸ್ವಾತಂತ್ರ್ಯದಿಂದ ಪರಮ ಸಾಧನೆ, ಸ್ವಾತಂತ್ರ್ಯದಿಂದ ಮುಕ್ತಿ ಮತ್ತು ಸ್ವಾತಂತ್ರ್ಯದಿಂದ ಪರಮ ಪದ ದೊರಕುತ್ತದೆ.
ಅಕರ್ತೃತ್ವಮಭೋಕ್ತೃತ್ವಂ ಸ್ವಾತ್ಮನೋ ಮನ್ಯತೇ ಯದಾ .
ತದಾ ಕ್ಷೀಣಾ ಭವಂತ್ಯೇವ ಸಮಸ್ತಾಶ್ಚಿತ್ತವೃತ್ತಯಃ .. ೧೮-೫೧..
ಮನುಷ್ಯನು ತಾನು ಕರ್ತೃವೂ ಅಲ್ಲ ಅಥವಾ ಭೋಕ್ತೃವೂ ಅಲ್ಲ ಎಂದು ಅರಿತುಕೊಂಡಾಗ, ಅವನ ಚಿತ್ತವೃತ್ತಿಗಳೆಲ್ಲ ಕ್ಷೀಣವಾಗುತ್ತವೆ.
ಉಚ್ಛೃಂಖಲಾಪ್ಯಕೃತಿಕಾ ಸ್ಥಿತಿರ್ಧೀರಸ್ಯ ರಾಜತೇ .
ನ ತು ಸಸ್ಪೃಹಚಿತ್ತಸ್ಯ ಶಾಂತಿರ್ಮೂಢಸ್ಯ ಕೃತ್ರಿಮಾ .. ೧೮-೫೨..
ಬುದ್ಧಿವಂತನ ನಡವಳಿಕೆಯು ಅನಿಯಂತ್ರಿತವಾದರೂ ಅಕೃತ್ರಿಮವಾಗಿ ಪ್ರಜ್ವಲಿಸುತ್ತದೆ, ಆಸೆಗಳಿಗೆ ಅಂಟಿಕೊಂಡಿರುವ ಮೂರ್ಖನ ಕೃತ್ರಿಮ ಶಾಂತತೆಯಲ್ಲ.
ವಿಲಸಂತಿ ಮಹಾಭೋಗೈರ್ವಿಶಂತಿ ಗಿರಿಗಹ್ವರಾನ್ .
ನಿರಸ್ತಕಲ್ಪನಾ ಧೀರಾ ಅಬದ್ಧಾ ಮುಕ್ತಬುದ್ಧಯಃ .. ೧೮-೫೩..
ಕಲ್ಪನೆಗಳಿಂದ ಮುಕ್ತರಾದ, ನಿರ್ಬಂಧವಿಲ್ಲದ ಮತ್ತು ಅನಿಯಂತ್ರಿತ ಬುದ್ಧಿಶಕ್ತಿಯನ್ನು ಹೊಂದಿರುವ ಬುದ್ಧಿವಂತರು, (ಕೆಲವೊಮ್ಮೆ) ಮಹಾನ್ ಆನಂದಗಳಲ್ಲಿ ವಿಲಾಸ ಮಾಡುತ್ತಾರೆ ಮತ್ತು (ಕೆಲವೊಮ್ಮೆ) ಪರ್ವತ ಗುಹೆಗಳಲ್ಲಿ ನಿವೃತ್ತರಾಗುತ್ತಾರೆ.
ಶ್ರೋತ್ರಿಯಂ ದೇವತಾಂ ತೀರ್ಥಮಂಗನಾಂ ಭೂಪತಿಂ ಪ್ರಿಯಂ .
ದೃಷ್ಟ್ವಾ ಸಂಪೂಜ್ಯ ಧೀರಸ್ಯ ನ ಕಾಪಿ ಹೃದಿ ವಾಸನಾ .. ೧೮-೫೪..
ವಿದ್ವಾಂಸನನ್ನು ಅಥವಾ ದೇವತೆಯನ್ನು ಅಥವಾ ಪುಣ್ಯಕ್ಷೇತ್ರವನ್ನು ಅಥವಾ ರಾಜನನ್ನು ಅಥವಾ ಪ್ರಿಯನನ್ನು ನೋಡಿದಾಗಲೂ ಧೀರನಲ್ಲಿ ಯಾವುದೇ ಆಸೆ ಉಂಟಾಗುವದಿಲ್ಲ. (ಅವನು ಎಲ್ಲರಲ್ಲೂ ಸಮಚಿತ್ತತೆ ಹೊಂದಿರುತ್ತಾನೆ)
ಭೃತ್ಯೈಃ ಪುತ್ರೈಃ ಕಲತ್ರೈಶ್ಚ ದೌಹಿತ್ರೈಶ್ಚಾಪಿ ಗೋತ್ರಜೈಃ .
ವಿಹಸ್ಯ ಧಿಕ್ಕೃತೋ ಯೋಗೀ ನ ಯಾತಿ ವಿಕೃತಿಂ ಮನಾಕ್ .. ೧೮-೫೫..
ಸೇವಕರು, ಪುತ್ರರು, ಪತ್ನಿಯರು, ಮೊಮ್ಮಕ್ಕಳು ಅಥವಾ ಸಂಬಂಧಿಕರಿಂದ ಅಪಹಾಸ್ಯಕ್ಕೊಳಗಾದರೂ, ಯೋಗಿಯು ಸ್ವಲ್ಪವೂ ಕ್ಷೋಭೆಗೆ ಒಳಗಾಗುವುದಿಲ್ಲ.
ಸಂತುಷ್ಟೋಽಪಿ ನ ಸಂತುಷ್ಟಃ ಖಿನ್ನೋಽಪಿ ನ ಚ ಖಿದ್ಯತೇ .
ತಸ್ಯಾಶ್ಚರ್ಯದಶಾಂ ತಾಂ ತಾಂ ತಾದೃಶಾ ಏವ ಜಾನತೇ .. ೧೮-೫೬..
ಅವನು ಸಂತೋಷಪಟ್ಟರೂ ಸಂತೋಷ ಪಡುವುದಿಲ್ಲ, ದುಃಖಿತನಾಗಿದ್ದರೂ ಯಾವುದೇ ನೋವನ್ನು ಅನುಭವಿಸುವುದಿಲ್ಲ. ಯೋಗಿಯ ಅದ್ಭುತ ಸ್ಥಿತಿಯನ್ನು ಅವನಂತಹವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ.
ಕರ್ತವ್ಯತೈವ ಸಂಸಾರೋ ನ ತಾಂ ಪಶ್ಯಂತಿ ಸೂರಯಃ .
ಶೂನ್ಯಾಕಾರಾ ನಿರಾಕಾರಾ ನಿರ್ವಿಕಾರಾ ನಿರಾಮಯಾಃ .. ೧೮-೫೭..
ಕರ್ತವ್ಯ ಎಂಬುದು ಸಂಸಾರಕ್ಕೆ ಸಂಬಂಧಿಸಿದೆ. ಅವನ್ನು ಶೂನ್ಯಾಕಾರ, ನಿರಾಕಾರ, ನಿರ್ವಿಕಾರ, ನಿಷ್ಕಲ್ಮಷವಾದ ಜ್ಞಾನಿಗಳು ನೋಡುವದಿಲ್ಲ.
ಅಕುರ್ವನ್ನಪಿ ಸಂಕ್ಷೋಭಾದ್ ವ್ಯಗ್ರಃ ಸರ್ವತ್ರ ಮೂಢಧೀಃ .
ಕುರ್ವನ್ನಪಿ ತು ಕೃತ್ಯಾನಿ ಕುಶಲೋ ಹಿ ನಿರಾಕುಲಃ .. ೧೮-೫೮..
ಏನನ್ನೂ ಮಾಡದಿದ್ದರೂ, ಮೂಢನ ಗೊಂದಲಮಯ ಮನಸ್ಸು ಗೊಂದಲದಿಂದ ಚಂಚಲವಾಗಿರುತ್ತದೆ, ಆದರೆ ಕುಶಲತೆಯುಳ್ಳವನು ಕರ್ಮಗಳನ್ನು ಮಾಡುವಾಗಲೂ ವಿಚಲಿತನಾಗಿರುವುದಿಲ್ಲ.
ಸುಖಮಾಸ್ತೇ ಸುಖಂ ಶೇತೇ ಸುಖಮಾಯಾತಿ ಯಾತಿ ಚ .
ಸುಖಂ ವಕ್ತಿ ಸುಖಂ ಭುಂಕ್ತೇ ವ್ಯವಹಾರೇಽಪಿ ಶಾಂತಧೀಃ .. ೧೮-೫೯..
ಯೋಗಿಯು ಸಂತೋಷದಿಂದ ಕುಳಿತುಕೊಳ್ಳುತ್ತಾನೆ, ಸಂತೋಷದಿಂದ ಮಲಗುತ್ತಾನೆ, ಸಂತೋಷದಿಂದ ಬರುತ್ತಾನೆ, ಹೋಗುತ್ತಾನೆ, ಮಾತನಾಡುತ್ತಾನೆ, ತಿನ್ನುತ್ತಾನೆ; ಲೌಕಿಕ ಚಟುವಟಿಕೆಯಲ್ಲಿಯೂ ಸಹ, ಶಾಂತ ಮನಸ್ಸನ್ನು ಹೊಂದಿರುವವ ಯೋಗಿಯು ನಿರಾಳವಾಗಿರುತ್ತಾನೆ.
ಸ್ವಭಾವಾದ್ಯಸ್ಯ ನೈವಾರ್ತಿರ್ಲೋಕವದ್ ವ್ಯವಹಾರಿಣಃ .
ಮಹಾಹ್ರದ ಇವಾಕ್ಷೋಭ್ಯೋ ಗತಕ್ಲೇಶಃ ಸುಶೋಭತೇ .. ೧೮-೬೦..
ಯಾರು ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡರೂ ಸಹ, ಇತರರಂತೆ ಕ್ಷೋಭೆಗೊಳಗಾಗುವದಿಲ್ಲವೋ, ಅವನು ದುಃಖದಿಂದ ಮುಕ್ತನಾಗಿ, ದೊಡ್ಡ ಸರೋವರದಂತೆ ತಳಮಳವಿಲ್ಲದೇ ಶೋಭಿಸುತ್ತಾನೆ.
ನಿವೃತ್ತಿರಪಿ ಮೂಢಸ್ಯ ಪ್ರವೃತ್ತಿ ರುಪಜಾಯತೇ .
ಪ್ರವೃತ್ತಿರಪಿ ಧೀರಸ್ಯ ನಿವೃತ್ತಿಫಲಭಾಗಿನೀ .. ೧೮-೬೧..
ಮೂಢನ ನಿಷ್ಕ್ರಿಯತೆಯೂ ಸಹ ಕ್ರಿಯೆಯಾಗುತ್ತದೆ ಮತ್ತು ಜ್ಞಾನಿಯ ಕ್ರಿಯೆಯೂ ಸಹ ನಿಷ್ಕ್ರಿಯತೆಯ ಫಲವನ್ನು ನೀಡುತ್ತದೆ.
ಪರಿಗ್ರಹೇಷು ವೈರಾಗ್ಯಂ ಪ್ರಾಯೋ ಮೂಢಸ್ಯ ದೃಶ್ಯತೇ .
ದೇಹೇ ವಿಗಲಿತಾಶಸ್ಯ ಕ್ವ ರಾಗಃ ಕ್ವ ವಿರಾಗತಾ .. ೧೮-೬೨..
ಮೂಢನು ಕೆಲವೊಮ್ಮೆ ತನ್ನ ಸ್ವತ್ತುಗಳ ಬಗ್ಗೆ ವೈರಾಗ್ಯ ತೋರಿಸುತ್ತಾನೆ. ಆದರೆ ಯಾರಿಗೆ ತನ್ನ ದೇಹದ ಮೇಲಿನ ಪ್ರೀತಿಯೇ ಮಾಯವಾಗಿದೆಯೋ, ಅವನಿಗೆ ಯಾವುದರ ಮೇಲೂ ಬಾಂಧವ್ಯ ಅಥವಾ ದ್ವೇಷ ಇರುವುದಿಲ್ಲ.
ಭಾವನಾಭಾವನಾಸಕ್ತಾ ದೃಷ್ಟಿರ್ಮೂಢಸ್ಯ ಸರ್ವದಾ .
ಭಾವ್ಯಭಾವನಯಾ ಸಾ ತು ಸ್ವಸ್ಥಸ್ಯಾದೃಷ್ಟಿರೂಪಿಣೀ .. ೧೮-೬೩..
ಮೂಢನು ಯಾವಗಲೂ ಯೋಚನೆ ಮತ್ತು ಯೋಚನೆಯಿಲ್ಲದಿರುವದು ಈ ಗೊಂದಲದಲ್ಲಿ ಸಿಲುಕಿರುತ್ತಾನೆ. ಜಾಣನಾದರೋ ಸ್ವಭಾವತಃ ಯೋಚನೆಯಿಲ್ಲದವನಾಗಿರುವದರಿಂದ, ಅವನು ಯಾವದು ಸರಿಯೋ ಅದನ್ನೇ ಯೋಚಿಸುತ್ತಾನೆ.
ಸರ್ವಾರಂಭೇಷು ನಿಷ್ಕಾಮೋ ಯಶ್ಚರೇದ್ ಬಾಲವನ್ ಮುನಿಃ .
ನ ಲೇಪಸ್ತಸ್ಯ ಶುದ್ಧಸ್ಯ ಕ್ರಿಯಮಾಣೇಽಪಿ ಕರ್ಮಣಿ .. ೧೮-೬೪..
ಮುನಿಯು ಮಗುವಿನಂತೆ ನಿಷ್ಕಾಮದಿಂದ ಕರ್ಮ ಮಾಡುವದರಿಂದ, ಅವನು ಆ ಕರ್ಮಗಳನ್ನು ಮಾಡುತ್ತದ್ದರೂ ಅವುಗಳಿಂದ ಕಳಂಕಿತವಾಗುವದಿಲ್ಲ.
ಸ ಏವ ಧನ್ಯ ಆತ್ಮಜ್ಞಃ ಸರ್ವಭಾವೇಷು ಯಃ ಸಮಃ .
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನ್ ಅಶ್ನನ್ನಿಸ್ತರ್ಷಮಾನಸಃ .. ೧೮-೬೫..
ಯಾರು ನೋಡುವಾಗ, ಕೇಳುವಾಗ, ಸ್ಪರ್ಶಿಸುವಾಗ, ವಾಸನೆ ನೋಡುವಾಗು, ತಿನ್ನುವಾಗ ನಿರಾಸಕ್ತನೋ, ಎಲ್ಲ ಭಾವಗಳಲ್ಲೂ ಸಮಾನವಾಗಿರುವನೋ, ಆ ಆತ್ಮಜ್ಞಾನಿಯೇ ಧನ್ಯನು.
ಕ್ವ ಸಂಸಾರಃ ಕ್ವ ಚಾಭಾಸಃ ಕ್ವ ಸಾಧ್ಯಂ ಕ್ವ ಚ ಸಾಧನಂ .
ಆಕಾಶಸ್ಯೇವ ಧೀರಸ್ಯ ನಿರ್ವಿಕಲ್ಪಸ್ಯ ಸರ್ವದಾ .. ೧೮-೬೬..
ಆಕಾಶದಂತೆ ಸರ್ವದಾ ನಿರ್ವಿಕಲ್ಪನಾದ ಧೀರನಿಗೆ ಸಂಸಾರ ಎಲ್ಲಿಯದು, ಪ್ರತ್ಯೇಕತೆಯ ಅರಿವು ಎಲ್ಲಿಯದು? ಅವನಿಗೆ ಗುರಿ ಎಲ್ಲಿಯದು, ಮಾರ್ಗ ಎಲ್ಲಿಯದು?
ಸ ಜಯತ್ಯರ್ಥಸಂನ್ಯಾಸೀ ಪೂರ್ಣಸ್ವರಸವಿಗ್ರಹಃ .
ಅಕೃತ್ರಿಮೋಽನವಚ್ಛಿನ್ನೇ ಸಮಾಧಿರ್ಯಸ್ಯ ವರ್ತತೇ .. ೧೮-೬೭..
ಯಾರು ಎಲ್ಲಾ ಉದ್ದೇಶಗಳನ್ನು ತ್ಯಜಿಸಿದವನೋ, ಸ್ವಭಾವತಃ ಪೂರ್ಣತೆಯನ್ನು ಸಾಕಾರಗೊಳಿಸಿದವನೋ, ಸ್ವಯಂಪ್ರೇರಿತ ಮತ್ತು ನಿರಂತರ ಆತ್ಮನಲ್ಲಿ ಪೂರ್ಣವಾಗಿ ಲೀನವಾಗಿದ್ದಾನೋ, ಅವನೇ ನಿಜವಾದ ವಿಜಯಶಾಲಿ.
ಬಹುನಾತ್ರ ಕಿಮುಕ್ತೇನ ಜ್ಞಾತತತ್ತ್ವೋ ಮಹಾಶಯಃ .
ಭೋಗಮೋಕ್ಷನಿರಾಕಾಂಕ್ಷೀ ಸದಾ ಸರ್ವತ್ರ ನೀರಸಃ .. ೧೮-೬೮..
ಇನ್ನೇನು ಹೇಳಬೇಕು? ಸತ್ಯವನ್ನು ತಿಳಿದಿರುವ, ಯಾವಾಗಲೂ ಭೋಗ ಅಥವಾ ಮುಕ್ತಿಯ ಬಯಕೆಯಿಂದ ಮುಕ್ತನಾಗಿರುವ ಮಹಾನ್ ಆತ್ಮನು ಎಲ್ಲದರಲ್ಲೂ ನಿರಾಸಕ್ತಿ ಹೊಂದಿರುತ್ತಾನೆ.
ಮಹದಾದಿ ಜಗದ್ದ್ವೈತಂ ನಾಮಮಾತ್ರವಿಜೃಂಭಿತಂ .
ವಿಹಾಯ ಶುದ್ಧಬೋಧಸ್ಯ ಕಿಂ ಕೃತ್ಯಮವಶಿಷ್ಯತೇ .. ೧೮-೬೯..
ಶುದ್ಧ ಅರಿವುಳ್ಳ ಮತ್ತು ಅತ್ಯುನ್ನತ ಸ್ವರ್ಗದಿಂದ ಭೂಮಿಯತನಕ ಪದಗಳಲ್ಲಿ ವ್ಯಕ್ತಪಡಿಸಬಹುದಾದ ಎಲ್ಲವನ್ನೂ ತ್ಯಜಿಸಿದ, ಮನುಷ್ಯನಿಗೆ ಮಾಡಬೇಕಾದದ್ದು ಏನು ತಾನೇ ಉಳಿದಿದೆ?
ಭ್ರಮಭೂತಮಿದಂ ಸರ್ವಂ ಕಿಂಚಿನ್ನಾಸ್ತೀತಿ ನಿಶ್ಚಯೀ .
ಅಲಕ್ಷ್ಯಸ್ಫುರಣಃ ಶುದ್ಧಃ ಸ್ವಭಾವೇನೈವ ಶಾಮ್ಯತಿ .. ೧೮-೭೦..
ಇದೆಲ್ಲವೂ ಭ್ರಮೆ ಹೊರತು ಬೇರೇನೂ ಅಲ್ಲ ಮತ್ತು ಏನೂ ಅಲ್ಲ ಎಂದು ಅರಿತುಕೊಂಡು, ವರ್ಣನಾತೀತವಾದದ್ದನ್ನು ಅನುಭವಿಸಿದ ಶುದ್ಧ ಮನುಷ್ಯನು ತನ್ನ ಸ್ವಭಾವದಿಂದಲೇ ಶಾಂತಿಯನ್ನು ಪಡೆಯುತ್ತಾನೆ,
ಶುದ್ಧಸ್ಫುರಣರೂಪಸ್ಯ ದೃಶ್ಯಭಾವಮಪಶ್ಯತಃ .
ಕ್ವ ವಿಧಿಃ ಕ್ವ ಚ ವೈರಾಗ್ಯಂ ಕ್ವ ತ್ಯಾಗಃ ಕ್ವ ಶಮೋಽಪಿ ವಾ .. ೧೮-೭೧..
ಸ್ವಭಾವತಃ ಶುದ್ಧ ಗ್ರಹಣಶೀಲನಾಗಿರುವವನು ಮತ್ತು ಯಾವುದೇ ತಿಳಿದಿರುವ ಅಸ್ತಿತ್ವದ ರೂಪವನ್ನು ಒಪ್ಪಿಕೊಳ್ಳದವನಿಗೆ ಯಾವುದೇ ನಿಯಮಗಳು, ವೈರಾಗ್ಯ, ತ್ಯಾಗ ಅಥವಾ ಧ್ಯಾನ ಇರುವುದಿಲ್ಲ.
ಸ್ಫುರತೋಽನಂತರೂಪೇಣ ಪ್ರಕೃತಿಂ ಚ ನ ಪಶ್ಯತಃ .
ಕ್ವ ಬಂಧಃ ಕ್ವ ಚ ವಾ ಮೋಕ್ಷಃ ಕ್ವ ಹರ್ಷಃ ಕ್ವ ವಿಷಾದಿತಾ .. ೧೮-೭೨..
ಅನಂತರೂಪಗಳಿಂದ ಹೊಳೆಯುವವನಿಗೆ ಮತ್ತು ಪ್ರಕೃತಿಯನ್ನು ಕಾರಣತ್ವವನ್ನು ನೋಡದವನಿಗೆ, ಬಂಧನ, ಮುಕ್ತಿ, ಸಂತೋಷ ಅಥವಾ ದುಃಖ ಎಲ್ಲಿದೆ?
ಬುದ್ಧಿಪರ್ಯಂತಸಂಸಾರೇ ಮಾಯಾಮಾತ್ರಂ ವಿವರ್ತತೇ .
ನಿರ್ಮಮೋ ನಿರಹಂಕಾರೋ ನಿಷ್ಕಾಮಃ ಶೋಭತೇ ಬುಧಃ .. ೧೮-೭೩..
ಮನಸ್ಸಿಗೆ ಮಾತ್ರ ವಿಸ್ತರಿಸಿರುವ ಲೌಕಿಕ ಅಸ್ತಿತ್ವದಲ್ಲಿ, ಮಾಯೆ ಮಾತ್ರ ಗೆಲ್ಲುತ್ತದೆ. ಆದರೆ ಜ್ಞಾನಿಯು 'ನಾನು', 'ನನ್ನದು' ಎಂಬ ಭಾವಗಳಿಲ್ಲದೇ ಮತ್ತು ಮೋಹವಿಲ್ಲದೆ ಬದುಕುತ್ತಾನೆ.
ಅಕ್ಷಯಂ ಗತಸಂತಾಪಮಾತ್ಮಾನಂ ಪಶ್ಯತೋ ಮುನೇಃ .
ಕ್ವ ವಿದ್ಯಾ ಚ ಕ್ವ ವಾ ವಿಶ್ವಂ ಕ್ವ ದೇಹೋಽಹಂ ಮಮೇತಿ ವಾ .. ೧೮-೭೪..
ದುಃಖದಿಂದ ಮುಕ್ತನಾಗಿ, ಅವಿನಾಶಿಯಾಗಿ ಆತ್ಮವನ್ನು ನೋಡುವ ಋಷಿಗೆ, ಜ್ಞಾನ ಎಲ್ಲಿದೆ, ಲೋಕ ಎಲ್ಲಿದೆ, ದೇಹ ಎಲ್ಲಿದೆ ಮತ್ತು "ನಾನು" ಮತ್ತು "ನನ್ನದು" ಎಂಬ ಭಾವನೆ ಎಲ್ಲಿದೆ?
ನಿರೋಧಾದೀನಿ ಕರ್ಮಾಣಿ ಜಹಾತಿ ಜಡಧೀರ್ಯದಿ .
ಮನೋರಥಾನ್ ಪ್ರಲಾಪಾಂಶ್ಚ ಕರ್ತುಮಾಪ್ನೋತ್ಯತತ್ಕ್ಷಣಾತ್ .. ೧೮-೭೫..
ಜಡ ಬುದ್ಧಿಯ ಮನುಷ್ಯನು ಮನೋನಿಯಂತ್ರಣ ಇತ್ಯಾದಿ ಅಭ್ಯಾಸಗಳನ್ನು ತ್ಯಜಿಸಿದ ಕೂಡಲೇ ಅವನು ಆಸೆ ಮತ್ತು ಭ್ರಮೆಗಳಿಗೆ ಬಲಿಯಾಗುತ್ತಾನೆ.
ಮಂದಃ ಶ್ರುತ್ವಾಪಿ ತದ್ವಸ್ತು ನ ಜಹಾತಿ ವಿಮೂಢತಾಂ .
ನಿರ್ವಿಕಲ್ಪೋ ಬಹಿರ್ಯತ್ನಾದಂತರ್ವಿಷಯಲಾಲಸಃ .. ೧೮-೭೬..
ಮಂದ ಬುದ್ಧಿಯ ಮನುಷ್ಯನು ಸತ್ಯವನ್ನು ಕೇಳಿದ ನಂತರವೂ ತನ್ನ ಭ್ರಮೆಯನ್ನು ಬಿಡುವುದಿಲ್ಲ. ಪ್ರಯತ್ನದ ಮೂಲಕ ಚಟುವಟಿಕೆಯಿಲ್ಲದೆ ಕಾಣಿಸಿಕೊಂಡರೂ, ಅವನೊಳಗೆ ಸುಪ್ತವಾಗಿ ಇಂದ್ರಿಯ-ವಸ್ತುಗಳ ಹಂಬಲವಿರುತ್ತದೆ.
ಜ್ಞಾನಾದ್ ಗಲಿತಕರ್ಮಾ ಯೋ ಲೋಕದೃಷ್ಟ್ಯಾಪಿ ಕರ್ಮಕೃತ್ .
ನಾಪ್ನೋತ್ಯವಸರಂ ಕರ್ತುಂ ವಕ್ತುಮೇವ ನ ಕಿಂಚನ .. ೧೮-೭೭..
ಲೋಕದ ದೃಷ್ಟಿಯಲ್ಲಿ ಅವನು ಕ್ರಿಯಾಶೀಲನಾಗಿದ್ದರೂ, ಜ್ಞಾನದ ಮೂಲಕ ಕ್ರಿಯೆಯನ್ನು ತ್ಯಜಿಸಿದ ಮನುಷ್ಯನಿಗೆ ಏನನ್ನೂ ಮಾಡಲು ಅಥವಾ ಮಾತನಾಡಲು ಯಾವುದೇ ಅವಕಾಶವಿರುವದಿಲ್ಲ.
ಕ್ವ ತಮಃ ಕ್ವ ಪ್ರಕಾಶೋ ವಾ ಹಾನಂ ಕ್ವ ಚ ನ ಕಿಂಚನ .
ನಿರ್ವಿಕಾರಸ್ಯ ಧೀರಸ್ಯ ನಿರಾತಂಕಸ್ಯ ಸರ್ವದಾ .. ೧೮-೭೮..
ಸದಾ ನಿರ್ವಿಕಾರಿ, ನಿರ್ಭಯನಾದ ಧೀರನಿಗೆ ಎಲ್ಲಿ ಕತ್ತಲು, ಎಲ್ಲಿ ಪ್ರಕಾಶ, ಎಲ್ಲಿ ತ್ಯಾಗ? ಯಾವುದೂ ಇಲ್ಲ.
ಕ್ವ ಧೈರ್ಯಂ ಕ್ವ ವಿವೇಕಿತ್ವಂ ಕ್ವ ನಿರಾತಂಕತಾಪಿ ವಾ .
ಅನಿರ್ವಾಚ್ಯಸ್ವಭಾವಸ್ಯ ನಿಃಸ್ವಭಾವಸ್ಯ ಯೋಗಿನಃ .. ೧೮-೭೯..
ವರ್ಣಿಸಲಾರದ ಸ್ವಭಾವದ, ಸ್ವಭಾವರಹಿತನಾದ ಯೋಗಿಗೆ ಧೈರ್ಯ ಎಲ್ಲಿ, ವಿವೇಚನೆ ಎಲ್ಲಿ, ನಿರ್ಭಯ ಎಲ್ಲಿ?
ನ ಸ್ವರ್ಗೋ ನೈವ ನರಕೋ ಜೀವನ್ಮುಕ್ತಿರ್ನ ಚೈವ ಹಿ .
ಬಹುನಾತ್ರ ಕಿಮುಕ್ತೇನ ಯೋಗದೃಷ್ಟ್ಯಾ ನ ಕಿಂಚನ .. ೧೮-೮೦..
ಬದುಕಿರುವಾಗ ಸ್ವರ್ಗವಿಲ್ಲ, ನರಕವಿಲ್ಲ, ಮುಕ್ತಿಯೂ ಇಲ್ಲ. ಇನ್ನೇನು ಹೇಳಬೇಕು? ಯೋಗದ ದೃಷ್ಟಿಕೋನದಿಂದ, ಏನೂ ಇಲ್ಲ.
ನೈವ ಪ್ರಾರ್ಥಯತೇ ಲಾಭಂ ನಾಲಾಭೇನಾನುಶೋಚತಿ .
ಧೀರಸ್ಯ ಶೀತಲಂ ಚಿತ್ತಮಮೃತೇನೈವ ಪೂರಿತಂ .. ೧೮-೮೧..
ಜ್ಞಾನಿಯು ಲಾಭವನ್ನು ಬಯಸುವುದಿಲ್ಲ ಅಥವಾ ನಷ್ಟವಾದಾಗ ದುಃಖಿಸುವುದಿಲ್ಲ. ಅವನ ಮನಸ್ಸು ಶಾಂತಗಿರುತ್ತದೆ, ಅಮೃತದಂತಹ ಆನಂದದಿಂದ ತುಂಬಿರುತ್ತದೆ.
ನ ಶಾಂತಂ ಸ್ತೌತಿ ನಿಷ್ಕಾಮೋ ನ ದುಷ್ಟಮಪಿ ನಿಂದತಿ .
ಸಮದುಃಖಸುಖಸ್ತೃಪ್ತಃ ಕಿಂಚಿತ್ ಕೃತ್ಯಂ ನ ಪಶ್ಯತಿ .. ೧೮-೮೨..
ಆಸೆ ಇಲ್ಲದವನು ಶಾಂತಿಯುತರನ್ನು(ಒಳ್ಳೆಯವರನ್ನು) ಹೊಗಳುವುದಿಲ್ಲ ಅಥವಾ ದುಷ್ಟರನ್ನು ಟೀಕಿಸುವುದೂ ಇಲ್ಲ. ಸುಖ ಮತ್ತು ದುಃಖ ಎರಡರಲ್ಲೂ ತೃಪ್ತನಾಗಿ, ಅವನಿಗೆ ಮಾಡಬೇಕಾದದ್ದು ಏನೂ ಕಂಡುಬರುವದಿಲ್ಲ.
ಧೀರೋ ನ ದ್ವೇಷ್ಟಿ ಸಂಸಾರಮಾತ್ಮಾನಂ ನ ದಿದೃಕ್ಷತಿ .
ಹರ್ಷಾಮರ್ಷವಿನಿರ್ಮುಕ್ತೋ ನ ಮೃತೋ ನ ಚ ಜೀವತಿ .. ೧೮-೮೩..
ಜ್ಞಾನಿಯು ಸಂಸಾರ-ಚಕ್ರವನ್ನ ದ್ವೇಷಿಸುವದಿಲ್ಲ ಅಥವಾ ಆತ್ಮವನ್ನು ಅರಿಯಲೂ ಬಯಸುವುದಿಲ್ಲ. ಸಂತೋಷ ಮತ್ತು ದುಃಖದಿಂದ ಮುಕ್ತನಾಗಿ, ಅವನು ಸತ್ತಿಲ್ಲ ಅಥವಾ ಜೀವಂತವಾಗಿಯೂ ಇಲ್ಲ.
ನಿಃಸ್ನೇಹಃ ಪುತ್ರದಾರಾದೌ ನಿಷ್ಕಾಮೋ ವಿಷಯೇಷು ಚ .
ನಿಶ್ಚಿಂತಃ ಸ್ವಶರೀರೇಽಪಿ ನಿರಾಶಃ ಶೋಭತೇ ಬುಧಃ .. ೧೮-೮೪..
ಪುತ್ರಪತ್ನಿಯರಲ್ಲಿ ಬಾಂಧವ್ಯವಿಲ್ಲದೇ, ಇಂದ್ರಿಯ ವಸ್ತುಗಳ ಮೇಲೆ ಆಸೆಯಿಲ್ಲದೇ, ಸ್ವಶರೀರದ ಮೇಲೆ ಚಿಂತೆಯಿಲ್ಲದೇ, ಯಾವ ನಿರೀಕ್ಷೆಗಳಿಲ್ಲದೇ ಜ್ಞಾನಿಯು ಶೋಭಿಸುತ್ತಾನೆ.
ತುಷ್ಟಿಃ ಸರ್ವತ್ರ ಧೀರಸ್ಯ ಯಥಾಪತಿತವರ್ತಿನಃ .
ಸ್ವಚ್ಛಂದಂ ಚರತೋ ದೇಶಾನ್ ಯತ್ರಸ್ತಮಿತಶಾಯಿನಃ .. ೧೮-೮೫..
ಎಲ್ಲೆಡೆ ಸಂತೃಪ್ತನಾದ, ಧೀರನು ಸ್ಥಳದಿಂದ ಸ್ಥಳಕ್ಕೆ ಮುಕ್ತವಾಗಿ ಅಲೆದಾಡುತ್ತ, ರಾತ್ರಿಯಾದಾಗ ನಿದ್ದೆ ಮಾಡುತ್ತ, ಏನು ಬಂದರೂ ಸ್ವೀಕರಿಸುತ್ತಾನೆ.
ಪತತೂದೇತು ವಾ ದೇಹೋ ನಾಸ್ಯ ಚಿಂತಾ ಮಹಾತ್ಮನಃ .
ಸ್ವಭಾವಭೂಮಿವಿಶ್ರಾಂತಿವಿಸ್ಮೃತಾಶೇಷಸಂಸೃತೇಃ .. ೧೮-೮೬..
ತನ್ನ ದೇಹವು ಎದ್ದರೂ ಅಥವಾ ಬಿದ್ದರೂ, ಮಹಾತ್ಮನು ಅದರ ಬಗ್ಗೆ ಯೋಚಿಸುವುದಿಲ್ಲ, ತನ್ನ ನಿಜವಾದ ಸ್ವಭಾವದ ನೆಲೆಯಲ್ಲಿ ವಿಶ್ರಾಂತನಾಗಿ ಸಂಸಾರದ ಬಗ್ಗೆ ಎಲ್ಲವನ್ನೂ ಮರೆತುಬಿಡುತ್ತಾನೆ.
ಅಕಿಂಚನಃ ಕಾಮಚಾರೋ ನಿರ್ದ್ವಂದ್ವಶ್ಛಿನ್ನಸಂಶಯಃ .
ಅಸಕ್ತಃ ಸರ್ವಭಾವೇಷು ಕೇವಲೋ ರಮತೇ ಬುಧಃ .. ೧೮-೮೭..
ಜ್ಞಾನಿಯು ಯಾವ ಆಸಿ್ತಯನ್ನೂ ಹೊಂದಿರದೆ, ತನಗೆ ಇಷ್ಟ ಬಂದಂತೆ ವರ್ತಿಸುತ್ತಾ, ದ್ವಂದ್ವ ಮತ್ತು ಸಂದೇಹಗಳಿಂದ ಮುಕ್ತನಾಗಿ, ಯಾವುದರ ಮೇಲೂ ಅವಲಂಬನೆಯಿಲ್ಲದೆ, ಒಂಟಿಯಾಗಿಯೇ ಆನಂದಪಡುತ್ತಾನೆ.
ನಿರ್ಮಮಃ ಶೋಭತೇ ಧೀರಃ ಸಮಲೋಷ್ಟಾಶ್ಮಕಾಂಚನಃ .
ಸುಭಿನ್ನಹೃದಯಗ್ರಂಥಿರ್ವಿನಿರ್ಧೂತರಜಸ್ತಮಃ .. ೧೮-೮೮..
ಯಾರಲ್ಲಿ 'ನನ್ನದು' ಎಂಬ ಭಾವನೆ ಇಲ್ಲವೋ, ಯಾರಿಗೆ ಮಣ್ಣು, ಕಲ್ಲು ಅಥವಾ ಚಿನ್ನ ಒಂದೇ ಆಗಿವೆಯೋ, ಯಾರ ಹೃದಯದ ಗಂಟುಗಳು ಹರಿದು ಹೋಗಿವೆಯೋ ಮತ್ತು ಯಾರು ರಜಸ್ ಮತ್ತು ತಮಸ್ಸುಗಳಿಂದ ಶುದ್ಧೀಕರಿಸಲ್ಪಟ್ಟಿದ್ದಾನೋ, ಆ ಬುದ್ಧಿವಂತನು ಮಹಿಮಾನ್ವಿತ.
ಸರ್ವತ್ರಾನವಧಾನಸ್ಯ ನ ಕಿಂಚಿದ್ ವಾಸನಾ ಹೃದಿ .
ಮುಕ್ತಾತ್ಮನೋ ವಿತೃಪ್ತಸ್ಯ ತುಲನಾ ಕೇನ ಜಾಯತೇ .. ೧೮-೮೯..
ಮುಕ್ತನೂ, ಸಂತೃಪ್ತನೂ, ಯಾವುದರ ಬಗ್ಗೆಯೂ ಗಮನವಿಲ್ಲದವನೂ, ಹೃದಯದಲ್ಲಿ ಯಾವುದೇ ಆಸೆಗಳಿಲ್ಲದವನೂ ಆಗಿರುವ ವ್ಯಕ್ತಿ ಯಾರೊಂದಿಗೂ ಹೋಲಿಸಲಾಗದವನು.
ಜಾನನ್ನಪಿ ನ ಜಾನಾತಿ ಪಶ್ಯನ್ನಪಿ ನ ಪಶ್ಯತಿ .
ಬ್ರುವನ್ನ್ ಅಪಿ ನ ಚ ಬ್ರೂತೇ ಕೋಽನ್ಯೋ ನಿರ್ವಾಸನಾದೃತೇ .. ೧೮-೯೦..
ತಿಳಿದಿದ್ದರೂ ಅವನಿಗೆ ತಿಳಿದಿಲ್ಲ; ನೋಡಿದರೂ ಅವನಿಗೆ ಕಾಣುವುದಿಲ್ಲ; ಮಾತನಾಡುತ್ತಿದ್ದರೂ ಮಾತನಾಡುವುದಿಲ್ಲ. ಆಸೆಗಳಿಲ್ಲದವನಲ್ಲದೆ ಬೇರೆ ಯಾರು ಹೀಗಿರಲು ಸಾಧ್ಯ?
ಭಿಕ್ಷುರ್ವಾ ಭೂಪತಿರ್ವಾಪಿ ಯೋ ನಿಷ್ಕಾಮಃ ಸ ಶೋಭತೇ .
ಭಾವೇಷು ಗಲಿತಾ ಯಸ್ಯ ಶೋಭನಾಶೋಭನಾ ಮತಿಃ .. ೧೮-೯೧..
ಭಿಕ್ಷುಕನಾಗಿರಲಿ ಅಥವಾ ರಾಜನಾಗಿರಲಿ, ಆಸೆಗಳಿಲ್ಲದವನು ಹಾಗೂ ಒಳ್ಳೆಯದು ಮತ್ತು ಕೆಟ್ಟದ್ದರ ಕಲ್ಪನೆಗಳು ಮಾಯವಾದವನು ಶೋಭಿಸುತ್ತಾನೆ.
ಕ್ವ ಸ್ವಾಚ್ಛಂದ್ಯಂ ಕ್ವ ಸಂಕೋಚಃ ಕ್ವ ವಾ ತತ್ತ್ವವಿನಿಶ್ಚಯಃ .
ನಿರ್ವ್ಯಾಜಾರ್ಜವಭೂತಸ್ಯ ಚರಿತಾರ್ಥಸ್ಯ ಯೋಗಿನಃ .. ೧೮-೯೨..
ನೇರ ಸ್ವಭಾವದ ಮತ್ತು ನಿರ್ವಂಚನೆಯ, ಜೀವನೋದ್ದೇಶ ಸಾಧಿಸಿದ ಯೋಗಿಗೆ, ಸ್ವಾತಂತ್ರ್ಯ ಎಲ್ಲಿ, ನಿರ್ಬಂಧ ಎಲ್ಲಿ ಅಥವಾ ಸತ್ಯದ ಖಚಿತತೆ ಎಲ್ಲಿ?
ಆತ್ಮವಿಶ್ರಾಂತಿತೃಪ್ತೇನ ನಿರಾಶೇನ ಗತಾರ್ತಿನಾ .
ಅಂತರ್ಯದನುಭೂಯೇತ ತತ್ ಕಥಂ ಕಸ್ಯ ಕಥ್ಯತೇ .. ೧೮-೯೩..
ಆಸೆಯಿಲ್ಲದವನಾದ, ದುಃಖ ನಾಶವಾದವನಾದ ಮತ್ತು ತನ್ನ ಆತ್ಮದಲ್ಲಿ ವಿಶ್ರಾಂತಿಯಿಂದ ತೃಪ್ತನಾದವನು ತನ್ನೊಳಗೇ ಏನನ್ನು ಅನುಭವಿಸುತ್ತಾನೆ ಎಂಬುದನ್ನು, ಹೇಗೆ ಮತ್ತು ಯಾರಿಗೆ ವಿವರಿಸಬಹುದು?
ಸುಪ್ತೋಽಪಿ ನ ಸುಷುಪ್ತೌ ಚ ಸ್ವಪ್ನೇಽಪಿ ಶಯಿತೋ ನ ಚ .
ಜಾಗರೇಽಪಿ ನ ಜಾಗರ್ತಿ ಧೀರಸ್ತೃಪ್ತಃ ಪದೇ ಪದೇ .. ೧೮-೯೪..
ಗಾಢ ನಿದ್ರೆಯಲ್ಲಿಯೂ ನಿದ್ರಿಸದ, ಕನಸಿನಲ್ಲಿಯೂ ಮಲಗದ, ಎಚ್ಚರದಲ್ಲಿಯೂ ಎಚ್ಚರವಾಗಿರದ, ಎಲ್ಲಾ ಪರಿಸ್ಥಿತಿಗಳಲ್ಲಿಯೂ ತೃಪ್ತನಾಗಿರುವ ಧೀರನು.
ಜ್ಞಃ ಸಚಿಂತೋಽಪಿ ನಿಶ್ಚಿಂತಃ ಸೇಂದ್ರಿಯೋಽಪಿ ನಿರಿಂದ್ರಿಯಃ .
ಸುಬುದ್ಧಿರಪಿ ನಿರ್ಬುದ್ಧಿಃ ಸಾಹಂಕಾರೋಽನಹಂಕೃತಿಃ .. ೧೮-೯೫..
ಜ್ಞಾನವುಳ್ಳ ಮನುಷ್ಯನು ಆಲೋಚನೆಯಲ್ಲಿ ನಿರತನಾಗಿದ್ದಾಗಲೂ ಆಲೋಚನೆಯಿಲ್ಲದವನಾಗಿರುತ್ತಾನೆ, ಅವನು ಇಂದ್ರಿಯಗಳನ್ನು ಹೊಂದಿದ್ದರೂ ಸಹ ಅವುಗಳನ್ನು ಹೊಂದಿರುವುದಿಲ್ಲ, ಬುದ್ಧಿವಂತಿಕೆಯನ್ನು ಹೊಂದಿದ್ದರೂ ಸಹ ಬುದ್ಧಿವಂತಿಕೆಯನ್ನು ಹೊಂದಿರುವುದಿಲ್ಲ ಮತ್ತು ಅಹಂ ಅನ್ನು ಹೊಂದಿದ್ದರೂ ಸಹ ಅಹಂಕಾರದ ಭಾವನೆಯನ್ನು ಹೊಂದಿರುವುದಿಲ್ಲ.
ನ ಸುಖೀ ನ ಚ ವಾ ದುಃಖೀ ನ ವಿರಕ್ತೋ ನ ಸಂಗವಾನ್ .
ನ ಮುಮುಕ್ಷುರ್ನ ವಾ ಮುಕ್ತಾ ನ ಕಿಂಚಿನ್ನ ಚ ಕಿಂಚನ .. ೧೮-೯೬..
ಅವನು ಸುಖಿಯೂ ಅಲ್ಲ, ದುಃಖಿಯೂ ಅಲ್ಲ, ಮೋಹಿತನೂ ಅಲ್ಲ, ನಿಷ್ಕಾಮಿಯೂ ಅಲ್ಲ, ಮುಕ್ತನೂ ಅಲ್ಲ, ಮುಮುಕ್ಷುವೂ ಅಲ್ಲ, ಅವನು ಇದೂ ಅಲ್ಲ, ಅದೂ ಅಲ್ಲ.
ವಿಕ್ಷೇಪೇಽಪಿ ನ ವಿಕ್ಷಿಪ್ತಃ ಸಮಾಧೌ ನ ಸಮಾಧಿಮಾನ್ .
ಜಾಡ್ಯೇಽಪಿ ನ ಜಡೋ ಧನ್ಯಃ ಪಾಂಡಿತ್ಯೇಽಪಿ ನ ಪಂಡಿತಃ .. ೧೮-೯೭..
ಧನ್ಯನು ವಿಚಲಿತನಾಗಿದ್ದರೂ ಸಹ ವಿಚಲಿತನಾಗಿರುವುದಿಲ್ಲ, ಧ್ಯಾನದಲ್ಲಿಯೂ ಧ್ಯಾನಸ್ಥನಾಗಿರುವುದಿಲ್ಲ, ಮಂದ ಸ್ಥಿತಿಯಲ್ಲಿಯೂ ಸಹ ಮಂದನಾಗಿರುವುದಿಲ್ಲ ಮತ್ತು ವಿದ್ಯೆಯನ್ನು ಹೊಂದಿದ್ದರೂ ಸಹ ಕಲಿತವನಲ್ಲ.
ಮುಕ್ತೋ ಯಥಾಸ್ಥಿತಿಸ್ವಸ್ಥಃ ಕೃತಕರ್ತವ್ಯನಿರ್ವೃತಃ .
ಸಮಃ ಸರ್ವತ್ರ ವೈತೃಷ್ಣ್ಯಾನ್ನ ಸ್ಮರತ್ಯಕೃತಂ ಕೃತಂ .. ೧೮-೯೮..
ಮುಕ್ತನಾದ ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಸ್ವಯಂ-ಸ್ವಾಧೀನನಾಗಿರುತ್ತಾನೆ ಮತ್ತು "ಮಾಡಲಾಗಿದೆ" ಮತ್ತು "ಇನ್ನೂ ಮಾಡಬೇಕಾಗಿದೆ" ಎಂಬ ಕಲ್ಪನೆಯಿಂದ ಮುಕ್ತನಾಗಿರುತ್ತಾನೆ. ಅವನು ಎಲ್ಲಿದ್ದರೂ ಒಂದೇ ಆಗಿರುತ್ತಾನೆ ಮತ್ತು ದುರಾಸೆಯಿಲ್ಲದೆ ಇರುತ್ತಾನೆ. ಅವನು ಏನು ಮಾಡಿದ್ದಾನೆ ಅಥವಾ ಮಾಡಿಲ್ಲ ಎಂಬುದರ ಬಗ್ಗೆ ಯೋಚಿಸುವುದಿಲ್ಲ.
ನ ಪ್ರೀಯತೇ ವಂದ್ಯಮಾನೋ ನಿಂದ್ಯಮಾನೋ ನ ಕುಪ್ಯತಿ .
ನೈವೋದ್ವಿಜತಿ ಮರಣೇ ಜೀವನೇ ನಾಭಿನಂದತಿ .. ೧೮-೯೯..
ಹೊಗಳಿದಾಗ ಅವನಿಗೆ ಸಂತೋಷವಾಗುವುದಿಲ್ಲ, ಟೀಕಿಸಿದಾಗ ಕೋಪ ಬರುವುದಿಲ್ಲ. ಅವನು ಸಾವಿನಿಂದ ವಿಚಲಿತನಾಗುವುದಿಲ್ಲ ಅಥವಾ ಜೀವನದಿಂದ ಸಂತೋಷಪಡುವುದಿಲ್ಲ. ಅವನು ಸಂತೋಷಪಡುವುದಿಲ್ಲ ಅಥವಾ ಆತಂಕಪಡುವುದಿಲ್ಲ.
ನ ಧಾವತಿ ಜನಾಕೀರ್ಣಂ ನಾರಣ್ಯಮುಪಶಾಂತಧೀಃ .
ಯಥಾತಥಾ ಯತ್ರತತ್ರ ಸಮ ಏವಾವತಿಷ್ಠತೇ .. ೧೮-೧೦೦..
ಶಾಂತ ಮನಸ್ಸಿನ ಅವನು ಜನಸಂದಣಿಯೊಳಗೆ ಧಾವಿಸುವುದಿಲ್ಲ ಅಥವಾ ಜನರಿಗೆ ಹೆದರಿ ಕಾಡಿಗೆ ಹೋಗುವದಿಲ್ಲ. ಅವನು ಎಲ್ಲೇ ಇದ್ದರೂ, ಹೇಗೇ ಇದ್ದರೂ, ಸ್ಥಿರ ಮತ್ತು ಸಮಚಿತ್ತದಿಂದ ಇರುತ್ತಾನೆ.
Comments
Post a Comment