ಅಷ್ಟಾವಕ್ರಗೀತೆ - ೧೪
ಶಾಂತಿ
ಜನಕ ಉವಾಚ-
 ಪ್ರಕೃತ್ಯಾ ಶೂನ್ಯಚಿತ್ತೋ ಯಃ ಪ್ರಮಾದಾದ್ ಭಾವಭಾವನಃ .
ನಿದ್ರಿತೋ ಬೋಧಿತ ಇವ ಕ್ಷೀಣಸಂಸ್ಮರಣೋ ಹಿ ಸಃ .. ೧೪-೧..
ಯಾರು ವಿಷಯಗಳಲ್ಲಿ ಸ್ವಭಾವತಃ ಶೂನ್ಯಚಿತ್ತನಾಗಿ, ರಾಗ-ದ್ವೇಷಗಳಿಂದ ಮುಕ್ತನಾಗಿರುತ್ತಾನೋ, ಅವನು ಪ್ರಮಾದವಶಾತ್ ವಿಷಯ ರಾಗ ದ್ವೇಷಗಳ ಬಗ್ಗೆ ಯೋಚಿಸಿದರೂ, ನಿದ್ರಿತನಾದವನಾದರೂ ಜಾಗೃತನಂತೆ ಅವನು ಆ ರಾಗ-ದ್ವೇಷಗಳಿಂದ ಪರಿಣಾಮಿತನಾಗುವದಿಲ್ಲ.
ಕ್ವ ಧನಾನಿ ಕ್ವ ಮಿತ್ರಾಣಿ ಕ್ವ ಮೇ ವಿಷಯದಸ್ಯವಃ .
ಕ್ವ ಶಾಸ್ತ್ರಂ ಕ್ವ ಚ ವಿಜ್ಞಾನಂ ಯದಾ ಮೇ ಗಲಿತಾ ಸ್ಪೃಹಾ .. ೧೪-೨..
ನನ್ನಲ್ಲಿ ಆಸೆ ನಾಶವಾಗಿ ಹೋದ ಮೇಲೆ, ಧನವೆಲ್ಲಿ, ಮಿತ್ರರೆಲ್ಲಿ, ವಿಷಯ ರೂಪದ ಕಳ್ಳರೆಲ್ಲಿ, ಶಾಸ್ತ್ರವೆಲ್ಲಿ, ಜ್ಞಾನ-ವಿಜ್ಞಾನವೆಲ್ಲಿ? (ಆತ್ಮಸಾಕ್ಷಾತ್ಕಾರವಾದ ಮೇಲೆ ನನಗೆ ಇವು ಯಾವುದರಲ್ಲೂ ಆಸಕ್ತಿಯೇ ಉಳಿದಿಲ್ಲ.)
ವಿಜ್ಞಾತೇ ಸಾಕ್ಷಿಪುರುಷೇ ಪರಮಾತ್ಮನಿ ಚೇಶ್ವರೇ .
ನೈರಾಶ್ಯೇ ಬಂಧಮೋಕ್ಷೇ ಚ ನ ಚಿಂತಾ ಮುಕ್ತಯೇ ಮಮ .. ೧೪-೩..
ಸಾಕ್ಷಿಪುರುಷನಾದ, ಪರಮಾತ್ಮನಾದ ಈಶ್ವರನನ್ನು ಅರಿತ ಮೇಲೆ, ನನಗೆ ಆಶಾರಾಹಿತ್ಯದಲ್ಲಿ, ಮೋಕ್ಷದಲ್ಲಿ ಆಸಕ್ತಿಯಿಲ್ಲ. ಮುಕ್ತಿ ದೊರಕಬೇಕೆಂಬ ಚಿಂತೆ ಕೂಡ ಇಲ್ಲ.
ಅಂತರ್ವಿಕಲ್ಪಶೂನ್ಯಸ್ಯ ಬಹಿಃ ಸ್ವಚ್ಛಂದಚಾರಿಣಃ .
ಭ್ರಾಂತಸ್ಯೇವ ದಶಾಸ್ತಾಸ್ತಾಸ್ತಾದೃಶಾ ಏವ ಜಾನತೇ .. ೧೪-೪..
ಅಂತರಂಗದಲ್ಲಿ ವಿಕಲ್ಪರಹಿತನಾದವನು, ಬಾಹ್ಯವಾಗಿ ಭ್ರಾಂತನಂತೆ ಸ್ವಚ್ಛಂದದಿಂದ ವ್ಯವಹರಿಸಿದರೂ ಸಹ, ಅವನು ಪರಿಸ್ಥಿತಿಯನ್ನು ಅವನಂತವರು (ಅವನಂತೆ ಆತ್ಮಸಾಕ್ಷಾತ್ಕಾರವಾದವರು) ಮಾತ್ರ ಅರಿಯಲು ಸಾಧ್ಯ. (ಅಂತಹ ಜ್ಞಾನಿಯನ್ನು ಅರಿಯಲು ಅಜ್ಞಾನಿಗಳಿಂದ ಸಾಧ್ಯವಿಲ್ಲ)
  
  
 
Comments
Post a Comment