ಅಷ್ಟಾವಕ್ರಗೀತೆ - ೧೩

 ಜನಕನ ಸಂತೋಷ

ಜನಕ ಉವಾಚ- 

ಅಕಿಂಚನಭವಂ ಸ್ವಾಸ್ಥ್ಯಂ ಕೌಪೀನತ್ವೇಽಪಿ ದುರ್ಲಭಂ .
ತ್ಯಾಗಾದಾನೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೧.. 

ರಾಜಾ ಜನಕನು ತನ್ನ ಸ್ಥಿತಿಯನ್ನು ವಿವರಿಸುತ್ತ ಹೀಗೆ ಮುಂದುವರಿಸುತ್ತಾನೆ.

(ಆತ್ಮದ ಹೊರತು)ಇನ್ನೇನೂ ಇಲ್ಲ ಎಂಬ ಭಾವನೆ, ಆ ವೈರಾಗ್ಯ, ಕೌಪೀನಧಾರಿಯಾದರೂ (ಎಲ್ಲ ತ್ಯಜಿಸಿ ಕೌಪೀನ ಮಾತ್ರ ಧರಿಸಿದರೂ) ದೊರಕುವದು ದುರ್ಲಭ. ಆದ್ದರಿಂದ ನಾನು ತ್ಯಾಗವನ್ನೂ, ಸ್ವೀಕರಿಸುವದನ್ನೂ ಎರಡನ್ನು ಬಿಟ್ಟು ಸುಖದಿಂದಿದ್ದೇನೆ.

ಕುತ್ರಾಪಿ ಖೇದಃ ಕಾಯಸ್ಯ ಜಿಹ್ವಾ ಕುತ್ರಾಪಿ ಖಿದ್ಯತೇ .
ಮನಃ ಕುತ್ರಾಪಿ ತತ್ತ್ಯಕ್ತ್ವಾ ಪುರುಷಾರ್ಥೇ ಸ್ಥಿತಃ ಸುಖಂ .. ೧೩-೨.. 

ಎಲ್ಲೋ ಒಂದೆಡೆ ಶರೀರದ ಬಾಧೆ (ಸಾಧನೆ ಮಾಡುವಾಗ), ಇನ್ನೆಲ್ಲೋ ಒಂದು ಕಡೆ ನಾಲಿಗೆಯ ಬಾಧೆ (ಶಾಸ್ತ್ರಗಳ ವಾಚನ ಮಾಡುವಾಗ), ಮತ್ತೆಲ್ಲೋ ಒಂದೆಡೆ ಮನಸ್ಸಿನ ಬಾಧೆ (ಧ್ಯಾನ ಮಾಡುವಾಗ), ಈ ಎಲ್ಲ ಬಾಧೆಗಳನ್ನೂ ತ್ಯಜಿಸಿ ನಾನು ಪುರುಷಾರ್ಥದಲ್ಲಿ ಸುಖವಾಗಿದ್ದೇನೆ.

ಕೃತಂ ಕಿಮಪಿ ನೈವ ಸ್ಯಾದ್ ಇತಿ ಸಂಚಿಂತ್ಯ ತತ್ತ್ವತಃ .
ಯದಾ ಯತ್ಕರ್ತುಮಾಯಾತಿ ತತ್ ಕೃತ್ವಾಸೇ ಯಥಾಸುಖಂ .. ೧೩-೩.. 

ತತ್ವಶ: ನೋಡಿದರೆ, ಯಾವ ಕರ್ಮವೂ ಆತ್ಮನಿಂದ ಕೃತವಲ್ಲ(ಎಲ್ಲ ಶರೀರ, ಮನ, ಬುದ್ಧಿಗಳಿಂದ ಕೃತ - ಆತ್ಮದಿಂದಲ್ಲ) ಎಂದು ಅರಿತು, ಯಾವುದು ಲಬ್ಧವೋ ಆ ಕಾರ್ಯವನ್ನು ಮಾಡಿಕೊಂಡು ಸುಖವಾಗಿದ್ದೇನೆ. 

ಕರ್ಮನೈಷ್ಕರ್ಮ್ಯನಿರ್ಬಂಧಭಾವಾ ದೇಹಸ್ಥಯೋಗಿನಃ .
ಸಂಯೋಗಾಯೋಗವಿರಹಾದಹಮಾಸೇ ಯಥಾಸುಖಂ .. ೧೩-೪.. 

ಕರ್ಮ, ನೈಷ್ಕರ್ಮ ಇವು ದೇಹವನ್ನು ನಂಟಿಕೊಂಡಿರುವ ಯೋಗಿಗಳಿಗೆ ಸಂಬಂಧಿಸುತ್ತದೆ. ನನಗೆ ದೇಹದ ನಂಟಿಲ್ಲ, ಹಾಗಾಗಿ ಕರ್ಮ ನಿಷ್ಕರ್ಮಗಳ ಬಂಧನವೂ ಇಲ್ಲ. ನನಗೆ ದೇಹದ ಬಾಂಧವ್ಯವಿಲ್ಲ ಅಥವಾ ಬೇರ್ಪಡಿಸುವಿಕೆಯೂ ಇಲ್ಲ. ನಾನು ಹಾಗಾಗಿ ಸುಖವಾಗಿದ್ದೇನೆ.

ಅರ್ಥಾನರ್ಥೌ ನ ಮೇ ಸ್ಥಿತ್ಯಾ ಗತ್ಯಾ ನ ಶಯನೇನ ವಾ .
ತಿಷ್ಠನ್ ಗಚ್ಛನ್ ಸ್ವಪನ್ ತಸ್ಮಾದಹಮಾಸೇ ಯಥಾಸುಖಂ .. ೧೩-೫.. 

ನಾನು ನಿಂತಿರಲಿ, ಕುಳಿತಿರಲಿ, ಹೋಗುತ್ತಿರಲಿ, ಮಲಗಿರಲಿ,  ಇವುಗಳಿಂದ ನನಗೆ ಯಾವುದೇ ಲಾಭ-ಹಾನಿಗಳಿಲ್ಲ. ಕುಳಿತು, ಹೋಗಿ, ಮಲಗಿ ಏನು ಮಾಡುತ್ತಿದ್ದರೂ ನಾನು ಸುಖವಾಗಿದ್ದೇನೆ. (ಲಾಭ ಹಾನಿಗಳೆಲ್ಲ ಶರೀರ-ಬುದ್ಧಿಯ ಕ್ರಿಯೆಯ ಪರಿಣಾಮಗಳು. ಅವುಗಳು ಆತ್ಮಕ್ಕೆ, ಆತ್ಮ ಸಾಕ್ಷಾತ್ಕಾರವಾದವನಿಗೆ ಯಾವುದೇ ಪರಿಣಾಮ ಉಂಟು ಮಾಡುವದಿಲ್ಲ.)

ಸ್ವಪತೋ ನಾಸ್ತಿ ಮೇ ಹಾನಿಃ ಸಿದ್ಧಿರ್ಯತ್ನವತೋ ನ ವಾ .
ನಾಶೋಲ್ಲಾಸೌ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೬.. 

ಮಲಗಿದ್ದರೆ ನನಗೆ ಹಾನಿ ಇಲ್ಲ. ಎದ್ದು ಪ್ರಯತ್ನಶೀಲನಾದರೆ ನನಗೆ ಯಾವುದೇ ಲಾಭ ಇಲ್ಲ. ಉಲ್ಲಾಸ ಮತ್ತು ನಾಶವನ್ನು ತ್ಯಜಿಸಿ ನಾನು ಸಂತೋಷವಾಗಿ ಬದುಕಿದ್ದೇನೆ.

ಸುಖಾದಿರೂಪಾ ನಿಯಮಂ ಭಾವೇಷ್ವಾಲೋಕ್ಯ ಭೂರಿಶಃ .
ಶುಭಾಶುಭೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೭.. 

ಸುಖ-ದುಃಖಗಳ ಕ್ಷಣಭಂಗುರತೆಯನ್ನು ಬೇರೆ ಬೇರೆ ಪರಿಸ್ಥಿತಿಯಲ್ಲಿ, ಪದೇ ಪದೇ ನೋಡಿ, ಶುಭ-ಅಶುಭಗಳನ್ನು ತ್ಯಜಿಸಿ ನಾನು ಸುಖದಿಂದ ಜೀವಿಸುತ್ತಿದ್ದೇನೆ.


ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨