ಅಷ್ಟಾವಕ್ರಗೀತಾ-೧೨

 ಜನಕನ ಸ್ಥಿತಿ

 ಜನಕ ಉವಾಚ .. 

ಕಾಯಕೃತ್ಯಾಸಹಃ ಪೂರ್ವಂ ತತೋ ವಾಗ್ವಿಸ್ತರಾಸಹಃ .
ಅಥ ಚಿಂತಾಸಹಸ್ತಸ್ಮಾದ್ ಏವಮೇವಾಹಮಾಸ್ಥಿತಃ .. 12-1..

ಜನಕನು ಆತ್ಮಜ್ಞಾನದ ನಂತರದ ತನ್ನ ಅನುಭೂತಿಗಳನ್ನು ವರ್ಣಿಸುತ್ತ ಹೀಗೆ ಹೇಳುತ್ತಾನೆ-

ಮೊದಲು ನಾನು ಕಾರ್ಯಕೃತ್ಯಗಳ ಬಗ್ಗೆ ನಿರಾಸಕ್ತನಾದೆ. ನಂತರ ಅತಿ ಮಾತುಕತೆಯ ಬಗ್ಗೆ ನಿರಾಸಕ್ತನಾದೆ. ನಂತರ ಯೋಚನೆ ಬಗ್ಗೆ ನಿರಾಸಕ್ತನಾದೆ. ಈಗ ನಾನು ಈ ಸ್ಥಿತಿಯಲ್ಲಿ ಇದ್ದೇನೆ. (ಮಾತು, ಕೃತಿ, ಚಿಂತೆ ಇವಲ್ಲವುಗಳಿಂದ ನಿರ್ಲಿಪ್ತನಾಗಿದ್ದೇನೆ)

ಪ್ರೀತ್ಯಭಾವೇನ ಶಬ್ದಾದೇರದೃಶ್ಯತ್ವೇನ ಚಾತ್ಮನಃ .
ವಿಕ್ಷೇಪೈಕಾಗ್ರಹೃದಯ ಏವಮೇವಾಹಮಾಸ್ಥಿತಃ .. 12-2..

ಶಬ್ದ ಇತ್ಯಾದಿ ಬಾಹ್ಯ ವಿಷಯಗಳಿಗೇ ಪ್ರೀತಿಯ ಅಭಾವದಿಂದ, ಆತ್ಮವು ಅನುಭವಕ್ಕೆ ಸಿಗದು ಎಂಬ ಸತ್ಯವನ್ನು ಅರಿತು, ಮನಸ್ಸನ್ನು ಏಕಾಗ್ರವಾಗಿಸಿ ನಾನು ಈ ಸ್ಥಿತಿಯಲ್ಲಿ ಇದ್ದೇನೆ. 

ಸಮಾಧ್ಯಾಸಾದಿವಿಕ್ಷಿಪ್ತೌ ವ್ಯವಹಾರಃ ಸಮಾಧಯೇ .
ಏವಂ ವಿಲೋಕ್ಯ ನಿಯಮಮೇವಮೇವಾಹಮಾಸ್ಥಿತಃ .. 12-3.. .

ಸಮಾಧಿ ಸ್ಥಿತಿ ಪಡೆಯಲು ಪ್ರಯತ್ನ ಪಡಬೇಕು ಯಾಕೆಂದರೆ ಬೇರೆ, ಬೇರೆ ಕವಚಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ . (ನಾನು ಈ ಶರೀರ, ನಾನು ಈ ಮನಸ್ಸು ಇತ್ಯಾದಿ ಮಿಥ್ಯಾಕವಚಗಳು ಸಮಾಧಿ ಪಡೆಯಲು ಅಡ್ಡಿ ಉಂಟುಮಾಡುತ್ತವೆ). ಈ ನಿಯಮವನ್ನು ನೋಡಿ, ಅರಿತು, ನಾನು ಈ ಸ್ಥಿತಿಯಲ್ಲಿ ಇದ್ದೇನೆ. 

ಹೇಯೋಪಾದೇಯವಿರಹಾದ್ ಏವಂ ಹರ್ಷವಿಷಾದಯೋಃ .
ಅಭಾವಾದದ್ಯ ಹೇ ಬ್ರಹ್ಮನ್ನ್ ಏವಮೇವಾಹಮಾಸ್ಥಿತಃ .. 12-4..

ಹೇ, ಬ್ರಹ್ಮನ್, ಕೆಟ್ಟದ್ದು-ಒಳಿತು ಈ ದ್ವಂದ್ವವಿಲ್ಲದೆ, ಹರ್ಷ-ವಿಷಾದಗಳ ಅನುಪಸ್ಥಿತಿಯಲ್ಲಿ, ನಾನು ಈ ಸ್ಥಿತಿಯಲ್ಲಿ ಇದ್ದೇನೆ. 

ಆಶ್ರಮಾನಾಶ್ರಮಂ ಧ್ಯಾನಂ ಚಿತ್ತಸ್ವೀಕೃತವರ್ಜನಂ .
ವಿಕಲ್ಪಂ ಮಮ ವೀಕ್ಷ್ಯೈತೈರೇವಮೇವಾಹಮಾಸ್ಥಿತಃ .. 12-5..

ಯಾವ ವರ್ಣಾಶ್ರಮಗಳಿಗೂ ಅತಿರಿಕ್ತನಾಗಿರುವೆ, ಧ್ಯಾನ-ಮನೋನಿಗ್ರಹ ಇತ್ಯಾದಿಗಳು ಮನಸ್ಸಿನ ಗೊಂದಲಕ್ಕೆ ಕಾರಣವೆಂದು, ಅರಿತು (ಅವುಗಳಿಗೂ ಅತಿರಿಕ್ತನಾಗಿ) ನಾನು ಈ ಸ್ಥಿತಿಯಲ್ಲಿ ಇದ್ದೇನೆ. (ಧ್ಯಾನ-ಮನೋನಿಗ್ರಹ ಇವೆಲ್ಲ ದೇಹ ಮತ್ತು ಮನಸ್ಸಿಗೆ ಅಂಟಿಕೊಂಡಿವೆ. ಆದರೆ ಆತ್ಮ ಅವುಗಳನ್ನು ಮೀರಿದೆ)

ಕರ್ಮಾನುಷ್ಠಾನಮಜ್ಞಾನಾದ್ ಯಥೈವೋಪರಮಸ್ತಥಾ .
ಬುಧ್ವಾ ಸಮ್ಯಗಿದಂ ತತ್ತ್ವಮೇವಮೇವಾಹಮಾಸ್ಥಿತಃ .. 12-6.. 

ಕರ್ಮಾನುಷ್ಠಾನಗಳು ಹೇಗೆ ಅಜ್ಞಾನದಿಂದ ಆಗುವವೋ, ಹಾಗೆಯೇ ಕರ್ಮಗಳ ನಿಲ್ಲಿಸುವಿಕೆ ಕೂಡ ಅಜ್ಞಾನದಿಂದಲೇ ಆಗುತ್ತದೆ. ಇದನ್ನು ಚೆನ್ನಾಗಿ ಅರಿತು ನಾನು ಈ ಸ್ಥಿತಿಯಲ್ಲಿ ಇದ್ದೇನೆ. 

ಅಚಿಂತ್ಯಂ ಚಿಂತ್ಯಮಾನೋಽಪಿ ಚಿಂತಾರೂಪಂ ಭಜತ್ಯಸೌ .
ತ್ಯಕ್ತ್ವಾ ತದ್ಭಾವನಂ ತಸ್ಮಾದ್ ಏವಮೇವಾಹಮಾಸ್ಥಿತಃ .. 12-7.. 

ಅಚಿಂತ್ಯನಾದ ಬ್ರಹ್ಮನನ್ನು ಚಿಂತಿಸುತ್ತಿದ್ದರೂ ಮನುಷ್ಯನು ಚಿಂತಾಮಯ ರೂಪವನ್ನು ಹೊಂದುತ್ತಾನೆ. ಅದಕ್ಕಾಗಿ ಚಿಂತಿಸುವದನ್ನೂ ತ್ಯಜಿಸಿ ನಾನು ಈ (ಆತ್ಮಸ್ವರೂಪದಲ್ಲಿ) ಇದ್ದೇನೆ.

ಏವಮೇವ ಕೃತಂ ಯೇನ ಸ ಕೃತಾರ್ಥೋ ಭವೇದಸೌ .
ಏವಮೇವ ಸ್ವಭಾವೋ ಯಃ ಸ ಕೃತಾರ್ಥೋ ಭವೇದಸೌ .. 12-8..

ಯಾರು ಸಾಧನೆಗಳನ್ನು ಮಾಡಿ, ಆತ್ಮಸ್ವರೂಪವನ್ನು ಪಡೆಯುತ್ತಾನೋ, ಅವನು ಕೃತಾರ್ಥನು. ಯಾರು ಸ್ವಭಾಹತಃ ಆತ್ಮಸ್ವರೂಪದಲ್ಲಿರುತ್ತಾನೋ, ಅವನೂ ಕೃತಾರ್ಥನು.


ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨