ಅಷ್ಟಾವಕ್ರಗೀತೆ -೧೫
ಆತ್ಮ ಜ್ಞಾನ
ಅಷ್ಟಾವಕ್ರ ಉವಾಚ ..
ಯಥಾತಥೋಪದೇಶೇನ ಕೃತಾರ್ಥಃ ಸತ್ತ್ವಬುದ್ಧಿಮಾನ್ .
ಆಜೀವಮಪಿ ಜಿಜ್ಞಾಸುಃ ಪರಸ್ತತ್ರ ವಿಮುಹ್ಯತಿ .. ೧೫-೧..
ಶುದ್ಧ ಬುದ್ಧಿವಂತನು ಹೇಗೋ ಹೇಗೋ ಮಾಡಿದ ಅಲ್ಪ ಸ್ವಲ್ಪ ಉಪದೇಶದಿಂದಲಾದರೂ, ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆ. ಆದರೆ (ರಜೋ-ತಮೋ ಗುಣಗಳಿಂದ ಪೀಡಿತನಾದ) ಇತರನು ಆಜೀವಪರ್ಯಂತ ಕಷ್ಟಪಟ್ಟರೂ ಅವನಿಗೆ ಆತ್ಮದ ತತ್ವ ತಿಳಿಯದೇ, ಬರಿದೇ ದಿಗ್ಭ್ರಮೆಗೊಳ್ಳುತ್ತಾನೆ.
ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ .
ಏತಾವದೇವ ವಿಜ್ಞಾನಂ ಯಥೇಚ್ಛಸಿ ತಥಾ ಕುರು .. ೧೫-೨..
ವಿಷಯಾಸಕ್ತಿ ಮೋಕ್ಷದ ಪರಮ ವೈರಿ. ಭೋಗಾಸಕ್ತಿಯೇ ಬಂಧನಕ್ಕೆ ಕಾರಣ. ಇದನ್ನು ತಿಳಿದು, ನಿನ್ನ ಇಚ್ಛೆಯಂತೆ ಮಾಡು.
ವಾಗ್ಮಿಪ್ರಾಜ್ಞಾಮಹೋದ್ಯೋಗಂ ಜನಂ ಮೂಕಜಡಾಲಸಂ .
ಕರೋತಿ ತತ್ತ್ವಬೋಧೋಽಯಮತಸ್ತ್ಯಕ್ತೋ ಬುಭುಕ್ಷಭಿಃ .. ೧೫-೩..
ಈ ತತ್ವಬೋಧವು ವಾಗ್ಮಿ, ಪ್ರಾಜ್ಞ, ಉದ್ಯಮಶೀಲ ಜನರನ್ನು ಮೌನಿಗಳಾಗಿ, ಜಡರನ್ನಾಗಿ, ನಿಷ್ಕ್ರಿಯರನ್ನಾಗಿ ಮಾಡುತ್ತದೆ. (ಆತ್ಮ ಸಾಕ್ಷಾತ್ಕಾರವಾದ ಮೇಲೆ ಇನ್ನೇನೂ ಸಾಧಿಸಲು, ಮಾತನಾಡಲು, ಕ್ರಿಯೆ ಮಾಡಲು ಉಳಿಯುವದಿಲ್ಲ. ಅದಕ್ಕಾಗಿ ಅಂತಹ ಜ್ಞಾನಿಯು ಬಾಹ್ಯದಲ್ಲಿ ಮೂಕನಾಗಿ, ನಿಷ್ಕ್ರಿಯನಾಗಿ, ಜಡನಾಗುತ್ತಾನೆ). ಅದಕ್ಕಾಗಿಯೇ ಬುಭುಕ್ಷಗಳು (ಭೋಗಾಸಕ್ತರು) ಈ ಜ್ಞಾನವನ್ನು ದೂರವಿಡುತ್ತಾರೆ.
ನ ತ್ವಂ ದೇಹೋ ನ ತೇ ದೇಹೋ ಭೋಕ್ತಾ ಕರ್ತಾ ನ ವಾ ಭವಾನ್ .
ಚಿದ್ರೂಪೋಽಸಿ ಸದಾ ಸಾಕ್ಷೀ ನಿರಪೇಕ್ಷಃ ಸುಖಂ ಚರ .. ೧೫-೪..
ನೀನು ದೇಹವಲ್ಲ, ನಿನ್ನ ದೇಹವೂ ಅಲ್ಲ. ನೀನು ಕಾರ್ಯ ಮಾಡುವವನೂ ಅಲ್ಲ, ಆನಂದಿಸುವವನೂ ಅಲ್ಲ. ನೀನು ಕೇವಲ ಸಾಕ್ಷಿ, ಮುಕ್ತನು, ಚಿತ್ ರೂಪಿಯು. (ಇದನ್ನು ತಿಳಿದು) ಸುಖದಿಂದ ವಿಹರಿಸು.
ರಾಗದ್ವೇಷೌ ಮನೋಧರ್ಮೌ ನ ಮನಸ್ತೇ ಕದಾಚನ .
ನಿರ್ವಿಕಲ್ಪೋಽಸಿ ಬೋಧಾತ್ಮಾ ನಿರ್ವಿಕಾರಃ ಸುಖಂ ಚರ .. ೧೫-೫..
ರಾಗ-ದ್ವೇಷಗಳು ಮನೋಧರ್ಮಗಳು. (ಆದರೆ) ಮನಸ್ಸು ನಿನ್ನದಲ್ಲ. ನೀನು ಜ್ಞಾನಿಯಾದ ಆತ್ಮ. ನೀನು ನಿರ್ವಿಕಾರಿ, ನಿರ್ವಿಕಲ್ಪ ಆತ್ಮ. (ಇದನ್ನು ತಿಳಿದು) ಸುಖದಿಂದ ವಿಹರಿಸು.
ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ .
ವಿಜ್ಞಾಯ ನಿರಹಂಕಾರೋ ನಿರ್ಮಮಸ್ತ್ವಂ ಸುಖೀ ಭವ .. ೧೫-೬..
ಸರ್ವಭೂತಗಳಲ್ಲಿ ನಿನ್ನನ್ನು ಕಂಡು, ನಿನ್ನಲ್ಲಿ ಸರ್ವಭೂತಗಳನ್ನು ಕಂಡು, ನಿರಹಂಕಾರಿಯಾಗಿ, ನಿರ್ಮಮನಾಗಿ ಸುಖಿಯಾಗು.
ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ .
ತತ್ತ್ವಮೇವ ನ ಸಂದೇಹಶ್ಚಿನ್ಮೂರ್ತೇ ವಿಜ್ವರೋ ಭವ .. ೧೫-೭..
ಸಾಗರದಲ್ಲಿ ಅಲೆಗಳು ಪ್ರಕಟವಾದಂತೆ, ಯಾವುದರಲ್ಲಿ ಈ ವಿಶ್ವ ಪ್ರಕಟವಾಗುವದೋ ಅದೇ ನೀನಾಗಿರುವೆ. ಓ, ಚಿನ್ಮೂರ್ತಿ, ಸಂದೇಹವಿಲ್ಲದೇ ಜ್ವರರಹಿತನಾಗು(ಸಂಸಾರ ಬಂಧನವೆಂಬ ಜ್ವರ).
ಶ್ರದ್ಧಸ್ವ ತಾತ ಶ್ರದ್ಧಸ್ವ ನಾತ್ರ ಮೋಹಂ ಕುರುಷ್ವ ಭೋಃ .
ಜ್ಞಾನಸ್ವರೂಪೋ ಭಗವಾನಾತ್ಮಾ ತ್ವಂ ಪ್ರಕೃತೇಃ ಪರಃ .. ೧೫-೮..
ನಂಬು, ಮಗು, ನಂಬು. ಈ ವಿಷಯದಲ್ಲಿ ಭ್ರಮೆ ಬೇಡ. ನೀನು ಜ್ಞಾನಸ್ವರೂಪ, ನೀನು ಭಗವಂತ, ನೀನು ಆತ್ಮ, ನೀನು ಪ್ರಕೃತಿಗಿಂತ ಅತೀತ.
ಗುಣೈಃ ಸಂವೇಷ್ಟಿತೋ ದೇಹಸ್ತಿಷ್ಠತ್ಯಾಯಾತಿ ಯಾತಿ ಚ .
ಆತ್ಮಾ ನ ಗಂತಾ ನಾಗಂತಾ ಕಿಮೇನಮನುಶೋಚಸಿ .. ೧೫-೯..
ಗುಣಗಳಿಂದ ತುಂಬಿದ ಈ ದೇಹ ಈ ಜಗತ್ತಿಗೆ ಬರುತ್ತದೆ, ಸ್ವಲ್ಪ ಸಮಯ ಇಲ್ಲಿ ಇರುತ್ತದೆ ಹಾಗೂ ಮರಳಿ ಹೋಗುತ್ತದೆ. ಆದರೆ ಆತ್ಮ ಎಲ್ಲಿಗೂ ಬರುವದೂ ಇಲ್ಲ, ಹೋಗುವದೂ ಇಲ್ಲ. ಹೀಗಿರುವಾಗ ಅದಕ್ಕಾಗಿ (ಆ ನಶ್ವರ ಶರೀರಕ್ಕಾಗಿ) ಯಾಕೆ ಶೋಕ ಪಡುತ್ತೀಯಾ?
ದೇಹಸ್ತಿಷ್ಠತು ಕಲ್ಪಾಂತಂ ಗಚ್ಛತ್ವದ್ಯೈವ ವಾ ಪುನಃ .
ಕ್ವ ವೃದ್ಧಿಃ ಕ್ವ ಚ ವಾ ಹಾನಿಸ್ತವ ಚಿನ್ಮಾತ್ರರೂಪಿಣಃ .. ೧೫-೧೦..
ದೇಹ ಒಂದು ಯುಗವಾದರೂ ಇರಲಿ, ಅಥವಾ ಈಗಲೇ ನಾಶವಾಗಲಿ, ಚಿತ್ ಸ್ವರೂಪನಾದ ನಿನಗೆ ಅದರಿಂದ ಆಗುವ ಲಾಭವಾದರೂ ಏನು ಅಥವಾ ಹಾನಿಯಾದರೂ ಏನು?
ತ್ವಯ್ಯನಂತಮಹಾಂಭೋಧೌ ವಿಶ್ವವೀಚಿಃ ಸ್ವಭಾವತಃ .
ಉದೇತು ವಾಸ್ತಮಾಯಾತು ನ ತೇ ವೃದ್ಧಿರ್ನ ವಾ ಕ್ಷತಿಃ .. ೧೫-೧೧..
ವಿಶ್ವವೆಂಬ ಅಲೆಗಳು ಸ್ವಭಾವಸಹಜವಾಗಿ ಉದಯಿಸಿಲಿ, ನಾಶವಾಗಲಿ, ಅನಂತ ಮಹಾಸಾಗರವಾದ ನಿನಗೆ ಯಾವ ಲಾಭ ಅಥವಾ ಹಾನಿಯಾಗುವದಿಲ್ಲ.
ತಾತ ಚಿನ್ಮಾತ್ರರೂಪೋಽಸಿ ನ ತೇ ಭಿನ್ನಮಿದಂ ಜಗತ್ .
ಅತಃ ಕಸ್ಯ ಕಥಂ ಕುತ್ರ ಹೇಯೋಪಾದೇಯಕಲ್ಪನಾ .. ೧೫-೧೨..
ಮಗು, ನೀನು ಕೇವಲ ಚಿತ್ ಸ್ವರೂಪನಾಗಿರುವೆ, ಜಗತ್ತು ನಿನ್ನೊಳಗೇ ಲೀನವಾಗಿದೆಯೇ ಹೊರತು ಬೇರೆಯಲ್ಲ. ಹೀಗಿರುವಾಗ ಜಗದ ಒಳಿತು ಕೆಡುಕುಗಳ ಕಲ್ಪನೆ ಯಾಕೆ?
ಏಕಸ್ಮಿನ್ನವ್ಯಯೇ ಶಾಂತೇ ಚಿದಾಕಾಶೇಽಮಲೇ ತ್ವಯಿ .
ಕುತೋ ಜನ್ಮ ಕುತೋ ಕರ್ಮ ಕುತೋಽಹಂಕಾರ ಏವ ಚ .. ೧೫-೧೩..
ಏಕನಾದ, ಅವ್ಯಯನಾದ, ಶಾಂತನಾದ, ನಿಷ್ಕಳಂಕನಾದ, ಚಿತ್ ಸ್ವರೂಪನಾದ ನಿನಗೆ ಜನ್ಮ ಎಲ್ಲಿಯದು, ಕರ್ಮ ಎಲ್ಲಿಯದು, ಅಹಂಕಾರ ಎಲ್ಲಿಯದು?
ಯತ್ತ್ವಂ ಪಶ್ಯಸಿ ತತ್ರೈಕಸ್ತ್ವಮೇವ ಪ್ರತಿಭಾಸಸೇ .
ಕಿಂ ಪೃಥಕ್ ಭಾಸತೇ ಸ್ವರ್ಣಾತ್ ಕಟಕಾಂಗದನೂಪುರಂ .. ೧೫-೧೪..
ನೀನು ಎಲ್ಲಿ ನೋಡಿದಲ್ಲಿ ಅಲ್ಲಿ ನೀನು ಕಾಣುವದು ನಿನ್ನದೇ ರೂಪಗಳನ್ನು. ಚಿನ್ನದ ಬಳೆ, ಗೆಜ್ಜೆ, ವಂಕಿಗಳು ಚಿನ್ನಕ್ಕಿಂತ ಭಿನ್ನವಾಗಿ ಎಂದಾದರೂ ಕಾಣುವದೇ?
ತಾತ್ಪರ್ಯವೆಂದರೆ ಕೇವಲ ಆತ್ಮ ಮಾತ್ರ ಸತ್ಯ. ಈ ಜಗತ್ತು ಆತ್ಮಕ್ಕಿಂತ ಬೇರೆಯಲ್ಲ. ನೀನು ನೋಡುವ ಪ್ರತಿಯೊಂದು ವ್ಯಕ್ತಿ ಅಥವಾ ಪ್ರಾಣಿ ಆತ್ಮವೇ ಆಗಿದೆ.
ಅಯಂ ಸೋಽಹಮಯಂ ನಾಹಂ ವಿಭಾಗಮಿತಿ ಸಂತ್ಯಜ .
ಸರ್ವಮಾತ್ಮೇತಿ ನಿಶ್ಚಿತ್ಯ ನಿಃಸಂಕಲ್ಪಃ ಸುಖೀ ಭವ .. ೧೫-೧೫..
ಇದು ನಾನು, ಇದು ನಾನಲ್ಲ ಎಂಬ ಭೇದವನ್ನು ಸಂಪೂರ್ಣ ತ್ಯಜಿಸು. ಸರ್ವವೂ ಆತ್ಮವೆಂದು ನಿಶ್ಚಿತ ಮಾಡಿಕೊಂಡು, ನಿರ್ಮೋಹಿಯಾಗಿ ಸುಖಿಯಾಗು.
ತವೈವಾಜ್ಞಾನತೋ ವಿಶ್ವಂ ತ್ವಮೇಕಃ ಪರಮಾರ್ಥತಃ .
ತ್ವತ್ತೋಽನ್ಯೋ ನಾಸ್ತಿ ಸಂಸಾರೀ ನಾಸಂಸಾರೀ ಚ ಕಶ್ಚನ .. ೧೫-೧೬..
ನಿನ್ನ ಅಜ್ಞಾನದಿಂದ ಮಾತ್ರ ಈ ವಿಶ್ವ (ಇರುವಂತೆ ತೋರುತ್ತದೆ). ವಾಸ್ತವಿಕವಾಗಿ ನೋಡಿದರೆ ನಿನ್ನ ಹೊರತು ಬೇರೆ ಯಾರೂ ಸಂಸಾರದಲ್ಲಿಯೂ ಇಲ್ಲ, ಅಥವಾ ಅದರಾಚೆಯೂ ಇಲ್ಲ.
ಭ್ರಾಂತಿಮಾತ್ರಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಯೀ .
ನಿರ್ವಾಸನಃ ಸ್ಫೂರ್ತಿಮಾತ್ರೋ ನ ಕಿಂಚಿದಿವ ಶಾಮ್ಯತಿ .. ೧೫-೧೭..
ಈ ವಿಶ್ವ ಕೇವಲ ಮಾಯೆಯೇ ಹೊರತು ಇನ್ನೇನೂ ಅಲ್ಲ ಎಂದು ತಿಳಿದವನು, ವಾಸನೆರಹಿತನಾಗಿ, ಕೇವಲ ಚಿತ್ ಸ್ವರೂಪನಾಗಿ ಏನೂ ಇಲ್ಲವೆಂದು ಶಾಂತನಾಗುತ್ತಾನೆ.
ಏಕ ಏವ ಭವಾಂಭೋಧಾವಾಸೀದಸ್ತಿ ಭವಿಷ್ಯತಿ .
ನ ತೇ ಬಂಧೋಽಸ್ತಿ ಮೋಕ್ಷೋ ವಾ ಕೃತಕೃತ್ಯಃ ಸುಖಂ ಚರ .. ೧೫-೧೮..
ಈ ಭವಸಾಗರದಲ್ಲಿ ನೀನು (ಆತ್ಮ) ಏಕೈಕನು ಆಗಿದ್ದೆ, ಒಬ್ಬನೇ ಇದ್ದೀಯಾ, ಮುಂದೆಯೂ ಒಬ್ಬನೇ ಇರುವೆ. ನಿನಗೆ ಬಂಧನವೂ ಇಲ್ಲ. ಮೋಕ್ಷವೂ ಇಲ್ಲ. (ಹಾಗಾಗಿ) ಸಂತೃಪ್ತನಾಗು, ಸುಖಿಯಾಗು. (ನಿನ್ನಲ್ಲೇ ವಿಶ್ವ ಅಡಗಿದೆ. ಹಾಗಾಗಿ ನೀನು ಅನಾದಿ ಕಾಲದಿಂದ ಇರುವೆ. ಮುಂದೆಯೂ ಇರುತ್ತೀಯಾ. ಸಚ್ಚದಾನಂದ ಸ್ವರೂಪ ಆತ್ಮನಾದ ನಿನಗೆ ಬಂಧನ ಎಲ್ಲಿಯದು? ಮೋಕ್ಷ ಎಲ್ಲಿಯದು?)
ಮಾ ಸಂಕಲ್ಪವಿಕಲ್ಪಾಭ್ಯಾಂ ಚಿತ್ತಂ ಕ್ಷೋಭಯ ಚಿನ್ಮಯ .
ಉಪಶಾಮ್ಯ ಸುಖಂ ತಿಷ್ಠ ಸ್ವಾತ್ಮನ್ಯಾನಂದವಿಗ್ರಹೇ .. ೧೫-೧೯..
ಸಂಕಲ್ಪ, ವಿಕಲ್ಪಗಳಿದ ನಿನ್ನ ಚಿತ್ತವನ್ನು ಕ್ಷೋಭೆಗೊಳಿಸಬೇಡ. ಶಾಂತನಾಗಿ, ಆನಂದಸ್ವರೂಪನಾಗಿ ನಿನ್ನಲ್ಲಿ ನೀನು ಸುಖದಿಂದಿರು.
ತ್ಯಜೈವ ಧ್ಯಾನಂ ಸರ್ವತ್ರ ಮಾ ಕಿಂಚಿದ್ ಹೃದಿ ಧಾರಯ .
ಆತ್ಮಾ ತ್ವಂ ಮುಕ್ತ ಏವಾಸಿ ಕಿಂ ವಿಮೃಶ್ಯ ಕರಿಷ್ಯಸಿ .. ೧೫-೨೦..
ಧ್ಯಾನವನ್ನೂ ಎಲ್ಲ ರೀತಿಯಲ್ಲಿ ತ್ಯಜಿಸು. ಮನದಲ್ಲಿ ಯಾವ ಭಾವವನ್ನೂ ಇಟ್ಟುಕೊಳ್ಳಬೇಡ. ನೀನೇ ಆತ್ಮ, ನೀನು ಬಂಧಮುಕ್ತ. ಯೋಚಿಸಿ ಏನು ತಾನೆ ಸಾಧಿಸುತ್ತೀಯಾ? (ಆತ್ಮಜ್ಞಾನವಾಗಿಲ್ಲದವರು ಭಗವಂತನ ಧ್ಯಾನ ಮಾಡುತ್ತಾರೆ. ನೀನೇ ಆತ್ಮನಾಗಿರುವಾಗ - ನಿನ್ನ ಮತ್ತು ಪರಮಾತ್ಮನಲ್ಲಿ ಭೇದವೇ ಇಲ್ಲದಿರುವಾಗ ಧ್ಯಾನವೆಲ್ಲಾ ಬೇಕಾಗಿಲ್ಲ.)
Comments
Post a Comment