ಅಷ್ಟಾವಕ್ರ ಗೀತಾ - ೧೦
ಪ್ರಶಾಂತತೆ
ಅಷ್ಟಾವಕ್ರ  ಉವಾಚ-
ವಿಹಾಯ ವೈರಿಣಂ ಕಾಮಮರ್ಥಂ ಚಾನರ್ಥಸಂಕುಲಂ .
ಧರ್ಮಮಪ್ಯೇತಯೋರ್ಹೇತುಂ ಸರ್ವತ್ರಾನಾದರಂ ಕುರು .. 10-1.. 
ವೈರಿಗಳಾದ ಕಾಮ, ಅನರ್ಥಗಳ ಸಂಕುಲವಾದ ಅರ್ಥ(ಧನ-ಕನಕ) ಮತ್ತು ಇವೆರಡಕ್ಕೂ ಹೇತುವಾದ ಧರ್ಮ (ಸತ್ಕರ್ಮ) ಈ ಮೂರನ್ನೂ ತ್ಯಜಿಸಿ, ಎಲ್ಲದರಲ್ಲೂ ಉದಾಸೀನತೆ ತೋರಿಸು.
(ನಾವು ಕರ್ಮ ಮಾಡುವದು ಸಂಪತ್ತು ಪಡೆಯಲು ಮತ್ತು ಸುಖ ಪಡೆಯಲು. ಆ ಕರ್ಮವೇ ಕಾಮ, ಅರ್ಥಗಳ ಗಳಿಕೆಗೆ ಕಾರಣ. ಹಾಗಾಗಿ ಸತ್ಕರ್ಮವನ್ನೂ ತ್ಯಜಿಸಬೇಕು. ಮೋಕ್ಷ ಪ್ರಾಪ್ತಿಗಾಗಿ ಧರ್ಮಾರ್ಥಕಾಮಗಳೆಲ್ಲವನ್ನೂ ತ್ಯಜಿಸಿ ಅವುಗಳ ಬಗ್ಗೆ ನಿರಾಸಕ್ತಿ ಹೊಂದು.)
ಸ್ವಪ್ನೇಂದ್ರಜಾಲವತ್ ಪಶ್ಯ ದಿನಾನಿ ತ್ರೀಣಿ ಪಂಚ ವಾ .
ಮಿತ್ರಕ್ಷೇತ್ರಧನಾಗಾರದಾರದಾಯಾದಿಸಂಪದಃ .. 10-2.. 
ಮೂರು-ನಾಲ್ಕು ದಿನ ಬಾಳುವ ಮಿತ್ರ, ಭೂಮಿ, ಧನ, ಮನೆ, ಮಡದಿ ಈ ಐದೂ ಮೋಹಗಳನ್ನೂ ಸ್ವಪ್ನದಂತೆ, ಮಾಯಾಜಾಲದಂತೆ ನೋಡು (ಅವುಗಳನ್ನು ತ್ಯಜಿಸು).
ಯತ್ರ ಯತ್ರ ಭವೇತ್ತೃಷ್ಣಾ ಸಂಸಾರಂ ವಿದ್ಧಿ ತತ್ರ ವೈ .
ಪ್ರೌಢವೈರಾಗ್ಯಮಾಶ್ರಿತ್ಯ ವೀತತೃಷ್ಣಃ ಸುಖೀ ಭವ .. 10-3.. 
ಎಲ್ಲೆಲ್ಲಿ ಕಾಮನೆಗಳು ಉಂಟಾಗುವದೋ, ಅಲ್ಲೆಲ್ಲ ಜಗದ ಮಾಯೆಯಿದೆ ಎಂದು ತಿಳಿ. ದೃಢ ವೈರಾಗ್ಯವನ್ನು ಅವಲಂಬಿಸಿ ಆಸೆಯಿಲ್ಲದವನಾಗಿ ಸುಖಿಯಾಗು.
ತೃಷ್ಣಾಮಾತ್ರಾತ್ಮಕೋ ಬಂಧಸ್ತನ್ನಾಶೋ ಮೋಕ್ಷ ಉಚ್ಯತೇ .
ಭವಾಸಂಸಕ್ತಿಮಾತ್ರೇಣ ಪ್ರಾಪ್ತಿತುಷ್ಟಿರ್ಮುಹುರ್ಮುಹುಃ .. 10-4.. 
ಆಸೆಯಿಂದಲೇ ಬಂಧನ ಉಂಟಾಗುತ್ತದೆ. ಆಸೆಯು ನಾಶವಾದಾಗ ಮೋಕ್ಷ ದೊರೆಯುತ್ತದೆ. ಈ ಜಗತ್ತಿನ ಬಂಧನಗಳಿಂದ ಹೊರಬಂದಾಗ ಮಾತ್ರ ನಿರಂತರವಾದ ತೃಪ್ತಿ ಸಿಗುತ್ತದೆ.
ತ್ವಮೇಕಶ್ಚೇತನಃ ಶುದ್ಧೋ ಜಡಂ ವಿಶ್ವಮಸತ್ತಥಾ .
ಅವಿದ್ಯಾಪಿ ನ ಕಿಂಚಿತ್ಸಾ ಕಾ ಬುಭುತ್ಸಾ ತಥಾಪಿ ತೇ .. 10-5.. 
ನೀನೇ (ಆತ್ಮವೇ) ಶುದ್ಧ ಚೈತನ್ಯವಾಗಿರುವೆ. ಈ ಜಗತ್ತು ಮಿಥ್ಯೆ ಹಾಗೂ ಜಡ ಹಾಗೂ ಬುದ್ಧಿವಿಹೀನವಾಗಿದೆ. ಅದನ್ನು ತಿಳಿಯದ ಅಜ್ಞಾನವೇನೂ ಇಲ್ಲ. ಹಾಗಾಗಿ ನಿನಗೆ ಯಾವದನ್ನು ತಿಳಿಯುವ ಆಸೆ ಇದೆ?
(ಎಲ್ಲಾ ಆಸೆಗಳೂ ಬಂಧನ. ಜ್ಞಾನದ ಆಸೆಯೂ ಬಂಧನವೇ. ಹಾಗಾಗಿ ಜ್ಞಾನದ ಆಸೆಯನ್ನೂ ತ್ಯಜಿಸಬೇಕು ಎಂದು ಅಷ್ಟಾವಕ್ರ ಹೇಳುತ್ತಾನೆ.)
ರಾಜ್ಯಂ ಸುತಾಃ ಕಲತ್ರಾಣಿ ಶರೀರಾಣಿ ಸುಖಾನಿ ಚ .
ಸಂಸಕ್ತಸ್ಯಾಪಿ ನಷ್ಟಾನಿ ತವ ಜನ್ಮನಿ ಜನ್ಮನಿ .. 10-6.. 
ನೀನು ರಾಜ್ಯ, ಮಕ್ಕಳು, ಪತ್ನಿಯರು, ಸುಖ ಇವೆಲ್ಲವುಗಳ ಬಂಧನಕ್ಕೊಳಗಾಗಿದ್ದರೂ, ಇವೆಲ್ಲವನ್ನು ಪ್ರತಿ ಜನ್ಮದಲ್ಲಿ ನೀನು ಕಳೆದುಕೊಳ್ಳುತ್ತಾ ಬಂದಿದ್ದೀಯಾ.
ಅಲಮರ್ಥೇನ ಕಾಮೇನ ಸುಕೃತೇನಾಪಿ ಕರ್ಮಣಾ .
ಏಭ್ಯಃ ಸಂಸಾರಕಾಂತಾರೇ ನ ವಿಶ್ರಾಂತಮಭೂನ್ ಮನಃ .. 10-7.. 
ಅರ್ಥ, ಕಾಮ, ಸುಕರ್ಮ ಇವೆಲ್ಲ ಇನ್ನು ಸಾಕು. ಇವುಗಳಿಂದ ಸಂಸಾರ ಅರಣ್ಯದಲ್ಲಿ ಎಂದಿಗೂ ಮನಸ್ಸಿನ ನೆಮ್ಮದಿ ಸಿಗಲಿಲ್ಲ.
 ಕೃತಂ ನ ಕತಿ ಜನ್ಮಾನಿ ಕಾಯೇನ ಮನಸಾ ಗಿರಾ .
ದುಃಖಮಾಯಾಸದಂ ಕರ್ಮ ತದದ್ಯಾಪ್ಯುಪರಮ್ಯತಾಂ .. 10-8.. 
ಎಷ್ಟು ಜನ್ಮಗಳಿಂದ ಕಾಯ, ವಾಕ್, ಮನಸ್ಸಿನಿಂದ ನೋವಿನಿಂದ ತುಂಬಿದ, ಕಷ್ಟಕರವಾದ ಕರ್ಮಗಳನ್ನು ಮಾಡುತ್ತಾ ಬಂದಿದ್ದೀಯಾ.ಈಗಲಾದರೂ ಅವನ್ನು ನಿಲ್ಲಿಸು.
Comments
Post a Comment