ಅಷ್ಟಾವಕ್ರಗೀತಾ - ೯

  ವೈರಾಗ್ಯ

ಅಷ್ಟಾವಕ್ರ ಉವಾಚ-

ಕೃತಾಕೃತೇ ಚ ದ್ವಂದ್ವಾನಿ ಕದಾ ಶಾಂತಾನಿ ಕಸ್ಯ ವಾ .
ಏವಂ ಜ್ಞಾತ್ವೇಹ ನಿರ್ವೇದಾದ್ ಭವ ತ್ಯಾಗಪರೋಽವ್ರತೀ .. 9-1..
 

ಈ ಕೆಲಸ ಮಾಡಬೇಕಾದದ್ದು, ಈ ಕೆಲಸ ಮಾಡಬಾರದ್ದು ಎಂಬ ದ್ವಂದ್ವ ಎಂದಿಗೂ ಕೊನೆಯಾಗದು, ಯಾರಿಗೂ ಕೊನೆಯಾಗದು. ಇದನ್ನು ಅರಿತು ನೀನು ತ್ಯಾಗಪರನಾಗಿ, ವಿರಕ್ತನಾಗಿ, ನಿರಾಸಕ್ತನಾಗು.

ಕಸ್ಯಾಪಿ ತಾತ ಧನ್ಯಸ್ಯ ಲೋಕಚೇಷ್ಟಾವಲೋಕನಾತ್ .
ಜೀವಿತೇಚ್ಛಾ ಬುಭುಕ್ಷಾ ಚ ಬುಭುತ್ಸೋಪಶಮಂ ಗತಾಃ .. 9-2..
 

ಯಾರಲ್ಲಿ ಈ ಲೋಕದ ಚೇಷ್ಟೆಗಳನ್ನು ನೋಡಿ (ಅವುಗಳ ನಿರರ್ಥಕತೆಯನ್ನು ಅರಿತು), ಜೀವಿಸುವ ಇಚ್ಛೆ, ಜೀವನವನ್ನು ಭೋಗಿಸುವ ಇಚ್ಛೆ ಮತ್ತು ಜ್ಞಾನದ ಇಚ್ಛೆ ಇವೆಲ್ಲವೂ ನಶಿಸುವದೋ, ಅಂತವನೇ ಧನ್ಯನು.

ಅನಿತ್ಯಂ ಸರ್ವಮೇವೇದಂ ತಾಪತ್ರಿತಯದೂಷಿತಂ .
ಅಸಾರಂ ನಿಂದಿತಂ ಹೇಯಮಿತಿ ನಿಶ್ಚಿತ್ಯ ಶಾಮ್ಯತಿ .. 9-3..
 

ಈ ಜಗದಲ್ಲಿ ಕಾಣುವದೆಲ್ಲ ಅಶಾಶ್ವತ ಮತ್ತು ಮೂರು ಬಗೆಯ ನೋವಿನಿಂದ ತುಂಬಿರುವದು, ನಿಂದನೀಯ, ಸಾರವಿಲ್ಲದ್ದು, ಹೇಯವಾದದ್ದು ಎನ್ನುವ ಸತ್ಯ ತಿಳಿದಾಗ ನೀನು ಶಾಂತನಾಗುವೆ.

ಕೋಽಸೌ ಕಾಲೋ ವಯಃ ಕಿಂ ವಾ ಯತ್ರ ದ್ವಂದ್ವಾನಿ ನೋ ನೃಣಾಂ .
ತಾನ್ಯುಪೇಕ್ಷ್ಯ ಯಥಾಪ್ರಾಪ್ತವರ್ತೀ ಸಿದ್ಧಿಮವಾಪ್ನುಯಾತ್ .. 9-4..
 

 ಮನುಜನಿಗೆ ಯಾವ ವಯಸ್ಸಿನಲ್ಲಿ ಅಥವಾ ಯಾವ ಕಾಲದಲ್ಲಿ ಸುಖ-ದುಃಖಗಳ, ಒಳಿತು-ಕೆಡುಕುಗಳ ದ್ವಂದ್ವ ಇರವದಿಲ್ಲ? ಅವುಗಳನ್ನು ಉಪೇಕ್ಷೆ ಮಾಡಿ, ಯಾವುದು ಪ್ರಾಪ್ತಿಯಾಗಿದೆಯೋ ಅದನ್ನು ಸಮಾಧಾನದಿಂದ ಸ್ವಿಕರಿಸಿ ಸಿದ್ಧಿಯನ್ನು ಗಳಿಸು.

ನಾನಾ ಮತಂ ಮಹರ್ಷೀಣಾಂ ಸಾಧೂನಾಂ ಯೋಗಿನಾಂ ತಥಾ .
ದೃಷ್ಟ್ವಾ ನಿರ್ವೇದಮಾಪನ್ನಃ ಕೋ ನ ಶಾಮ್ಯತಿ ಮಾನವಃ .. 9-5..
 

ಮಹರ್ಷಿಗಳು, ಸಾಧುಗಳು, ಯೋಗಿಗಳು ನಾನಾ ವಿಧದ ಅಭಿಪ್ರಾಯಗಳನ್ನು ಹೇಳುತ್ತಾರೆ. (ಕೆಲವರು ಹೇಳುತ್ತಾರೆ- ಹೋಮ ಮಾಡು. ಇನ್ನು ಕೆಲವರು ಹೇಳುತ್ತಾರೆ - ಮಂತ್ರ ಪಠನ ಮಾಡು. ಕೆಲವರು ಶಿವನನ್ನು ಭಜಿಸು ಎನ್ನುತ್ತಾರೆ. ಕೆಲವರು ಶಕ್ತಿಯನ್ನು, ಇನ್ನೂ ಕೆಲವರು ವಿಷ್ಣುವನ್ನು.) ಇವೆಲ್ಲವನ್ನೂ ನೋಡಿದಾಗ, ಯಾರು ತಾನೆ ಇವೆಲ್ಲವನ್ನೂ ತ್ಯಜಿಸಿ ಶಾಂತವಾಗುವದಿಲ್ಲ?

ಕೃತ್ವಾ ಮೂರ್ತಿಪರಿಜ್ಞಾನಂ ಚೈತನ್ಯಸ್ಯ ನ ಕಿಂ ಗುರುಃ .
ನಿರ್ವೇದಸಮತಾಯುಕ್ತ್ಯಾ ಯಸ್ತಾರಯತಿ ಸಂಸೃತೇಃ .. 9-6..
 

ಚೈತನ್ಯ - ಆತ್ಮದ ಸ್ವರೂಪವನ್ನು ಅರಿತು, ಭೇದಭಾವಗಳಿಲ್ಲದ ಸಮತಾಭಾವದಿಂದ ಯಾರು ತನ್ನನ್ನು ರಕ್ಷಿಸಿಕೊಳ್ಳುತ್ತಾನೋ ಅವನು ಗುರುವಲ್ಲವೇನು?  

ಪಶ್ಯ ಭೂತವಿಕಾರಾಂಸ್ತ್ವಂ ಭೂತಮಾತ್ರಾನ್ ಯಥಾರ್ಥತಃ .
ತತ್ಕ್ಷಣಾದ್ ಬಂಧನಿರ್ಮುಕ್ತಃ ಸ್ವರೂಪಸ್ಥೋ ಭವಿಷ್ಯಸಿ .. 9-7..
 

ಮನ-ಶರೀರ-ಬುದ್ಧಿಗಳ ವಿಕಾರಗಳನ್ನು ಕೇವಲ ಮೂಲಭೂತ ಅಂಶಗಳು, ಮತ್ತೇನೂ ಅಲ್ಲ ಎಂದು ಅರಿತಾಗ, ಆ ಕ್ಷಣವೇ ನೀನು ಬಂಧಮುಕ್ತನಾಗಿ ನೈಜ ಸ್ವರೂಪವನ್ನು ಹೊಂದುತ್ತೀಯಾ.  

ವಾಸನಾ ಏವ ಸಂಸಾರ ಇತಿ ಸರ್ವಾ ವಿಮುಂಚ ತಾಃ .
ತತ್ತ್ಯಾಗೋ ವಾಸನಾತ್ಯಾಗಾತ್ಸ್ಥಿತಿರದ್ಯ ಯಥಾ ತಥಾ .. 9-8..
 

ಆಸೆಯಿಂದಲೇ ಈ ಜಗದ ಬಂಧನಗಳೆಲ್ಲ. ಆಸೆಗಳನ್ನು ತ್ಯಜಿಸಬೇಕು. ಆಸೆ ತ್ಯಜಿಸಿದರೆ ಜಗತ್ತನ್ನು ತ್ಯಜಿಸಿದಂತೇ. ಆಗ ನೀನು ಎಲ್ಲಾದರೂ ಇರಬಹುದು. 

 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ. 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨